ಮತದಾರರಿಗೆ ಗುಂಡು ಪಾರ್ಟಿ ನೀಡಿದ ನೈಋತ್ಯ ವಿಧಾನಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸೋಲಿಸಿ ರಘುಪತಿ ಭಟ್ ಗೆಲ್ಲಿಸಲು ಕಟ್ಟರ್ ಹಿಂದುತ್ವವಾದಿ ಕರೆ
ಶಿವಮೊಗ್ಗ: ನೈಋತ್ಯ ವಿಧಾನಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿರುದ್ಧ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ. ಪದವೀಧರ ಮತದಾರರಿಗೆ ‘ಗುಂಡು’ ಪಾರ್ಟಿ ನೀಡುತ್ತಿದ್ದು, ಈ ಮಟ್ಟಕ್ಕೆ ಇಳಿಯುವ ಮೂಲಕ ಡಾ.ಸರ್ಜಿ ಬಿಜೆಪಿಯ ಮೂಲ ಆಶಯಕ್ಕೇ ಸರ್ಜಿ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರಲ್ಲದೆ, ಹರ್ಷ ಕೊಲೆ ಪ್ರಕರಣದಲ್ಲಿ ಇಡೀ ಹಿಂದೂ ಸಮುದಾಯ ನೊಂದು, ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದರೆ, ನಮಗೆ ರಕ್ತ ಕುದಿಯುತ್ತಿದ್ದರೆ ಇದೇ ಡಾ. ಸರ್ಜಿ ನಗರ ನಕ್ಸಲರು, ಮುಸ್ಲಿಂ ನಾಯಕರು, ಕ್ರೈಸ್ತ ಮುಖಂಡರ ಜೊತೆ ಸೇರಿಕೊಂಡು ಶಾಂತಿಗಾಗಿ ನಡಿಗೆ ಎಂದು ಹೋಗಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪದವೀಧರ ಮತದಾರರಿಗೆ ‘ಗುಂಡು’ ಪಾರ್ಟಿ ನೀಡಿರುವ ಸಂಸ್ಕೃತಿಯ ಡಾ.ಸರ್ಜಿಯವರನ್ನು ನಮ್ಮ ಪದವೀಧರ ಮತದಾರರು ಯಾವುದೇ ಕಾರಣಕ್ಕೂ ಕೈ ಹಿಡಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ಸರ್ಜಿ ಸುಸಂಸ್ಕೃತ ಮನೆತನದಿಂದಲೇ ಬಂದವರು. ಆದರೆ ಕೇವಲ ಗೆಲ್ಲಬೇಕೆಂಬ ಒಂದೇ ಉದ್ದೇಶಕ್ಕೆ‘ಗುಂಡು’ಪಾರ್ಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬೆಳೆಯುತ್ತಿರುವ ಬಿಜೆಪಿಯಲ್ಲಿ ಇಂತಹ ಬೆಳವಣಿಗೆಗಳು ತೀವ್ರ ಅಘಾತ ತಂದಿದೆ ಎಂದರು. ಡಾ. ಧನಂಜಯ ಸರ್ಜಿ ನೀಡಿದ ಗುಂಡು ಪಾರ್ಟಿಯಲ್ಲಿ ಪಾಲ್ಗೊಂಡವರೇ ಮಾರನೇ ದಿನ ನನಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದು, ತಾವೆಲ್ಲರೂ ರಘುಪತಿ ಭಟ್ ಗೇ ಮತ ಹಾಕುವುದಾಗಿಯೂ ತಿಳಿಸಿದ್ದಾರೆ. ಒಟ್ಟಾರೆ ಬಿಜೆಪಿಯ ಶೇ. 70-80 ರಷ್ಟು ಮಂದಿ ರಘುಪತಿ ಭಟ್ ಗೆ ಮತ ಹಾಕಲಿದ್ದು, ಭಟ್ಟರು ಭಾರೀ ಬಹುಮತದಿಂದ ಗೆಲ್ಲಲಿದ್ದಾರೆ. ಯಾರು ಕೆಜೆಪಿಯಲ್ಲಿದ್ದರೋ ಅವರು ಮಾತ್ರ ಡಾ.ಧನಂಜಯ ಸರ್ಜಿಯವರಿಗೆ ಮತ ಹಾಕಲಿದ್ದಾರೆ ಎಂದರು.
ನಾನು 40 ವರ್ಷಗಳ ಚುನಾವಣಾ ರಾಜಕೀಯದಲ್ಲಿ ಕಳೆದ ಲೋಕಸಭಾ ಚುನಾವಣೆ ಹೊರತು ಪಡಿಸಿ ಉಳಿದ ಎಲ್ಲ ಚುನಾವಣೆಯನ್ನು ಬಿಜೆಪಿ ವ್ಯವಸ್ಥೆಯಲ್ಲಿ ಗೆದ್ದಿದ್ದೇನೆ. ನಾನು ಮಾತ್ರವಲ್ಲ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಡಿ. ಎಚ್. ಶಂಕರಮೂರ್ತಿಯವರು, ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ, ಆಯನೂರು ಮಂಜುನಾಥ್ ಸೇರಿದಂತೆ ಎಲ್ಲ ಬಿಜೆಪಿ ಅಭ್ಯರ್ಥಿಗಳೂ ಇದೇ ವ್ಯವಸ್ಥೆಯಲ್ಲಿ ಗೆದ್ದಿದ್ದೇವೆ. ಆದರೆ ಈಗ ಚುನಾವಣಾ ಪ್ರಚಾರ ಎಂಬುದು ಈ ಮಟ್ಟಕ್ಕೆ ಬಂದಿದೆ ಎಂದು ಖೇಧವಾಗುತ್ತದೆ ಎಂದು ಕಟುವಾಗಿ ಟೀಕಿಸಿದರು. ಗೋಷ್ಠಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಮತ್ತಿತರರಿದ್ದರು.
ಶಾಂತಿಗಾಗಿ ನಡಿಗೆ ಹೋಗಿದ್ದೇಕೆ?: ಹಿಂದೂ ಹರ್ಷ ಕೊಲೆ ಪ್ರಕರಣದಲ್ಲಿ ಇಡೀ ಹಿಂದೂ ಸಮುದಾಯ ನೊಂದು, ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದರೆ, ನಮಗೆ ರಕ್ತ ಕುದಿಯುತ್ತಿದ್ದರೆ ಇದೇ ಡಾ. ಸರ್ಜಿ ನಗರ ನಕ್ಸಲರು, ಮುಸ್ಲಿಂ ನಾಯಕರು, ಕ್ರೈಸ್ತ ಮುಖಂಡರ ಜೊತೆ ಸೇರಿಕೊಂಡು ಶಾಂತಿಗಾಗಿ ನಡಿಗೆ ಎಂದು ಹೋಗಿದ್ದರು. ಕೇವಲ ಚುನಾವಣೆಗೆ ನಿಲ್ಲಬೇಕೆಂದು ಆಗ ಈ ರೀತಿ ವರ್ತನೆ ತೋರಿಸಿದ್ದರು. ಹಿಂದೂಗಳ ಪರವಾಗಿ ನಿಲ್ಲದಿದ್ದರೂ ಪರವಾಗಿರಲಿಲ್ಲ, ಕನಿಷ್ಟ ಸುಮ್ಮನಿದ್ದರೂ ಸಾಕಿತ್ತು. ಆದರೆ ಯಾವ ರೀತಿ ನಡೆದುಕೊಂಡರು ಎಂಬುದನ್ನು ಜನ ಮರೆತಿಲ್ಲ ಎಂದು ಈಶ್ವರಪ್ಪ ಹೇಳಿದರು.