ಬೆಂಗಳೂರು; ತುಳುನಾಡಿನಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಕಾರಣರಾದವರನ್ನು ತುಳಿಯಲಾಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೃಷ್ಣ ಜೆ. ಪಾಲೆಮಾರ್, ಮಹೇಶ್ ಶೆಟ್ಟಿ ತಿಮರೋಡಿ, ತುಂಗಪ್ಪ ಬಂಗೇರಾ, ಬಿ. ನಾಗರಾಜ ಶೆಟ್ಟಿ, ಡಿವಿ ಸದಾನಂದ ಗೌಡ, ಸತ್ಯಜಿತ್ ಸುರತ್ಕಲ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಹೀಗೆ ಹಲವರು ರಾಜಕೀಯದಿಂದ ಮರೀಚಿಕೆಯಾಗಿದ್ದಾರೆ. ಇದೀಗ ಅವರದ್ದೇ ಸಾಲಿಗೆ ಉಡುಪಿ ಮಾಜಿ ಶಾಸಕ ರಘುಪತಿ ಅವರನ್ನೂ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಘುಪತಿ ಭಟ್ಟರು ಶಾಸಕರಾಗಿ ಉಡುಪಿಯ ಅಭಿವೃದ್ಧಿಗೆ ಕಾರಣರಾದರು. ಆದರೆ ಈ ಬಾರಿ ಅವರಿಗೆ ಎಂಎಲ್‌ಎ ಟಿಕೆಟ್ ನಿರಾಕರಿಸಿ ಅವರ ಶಿಷ್ಯ ಯಶ್‌ಪಾಲ್ ಸುವರ್ಣರಿಗೆ ಬಿಜೆಪಿ ಟಿಕೆಟ್ ನೀಡಿತು. ಉಡುಪಿ ಬಿಜೆಪಿಯ ಭದ್ರಕೋಟೆ ಆಗಿರುವುದರಿಂದ ಯಶ್‌ಪಾಲ್ ಸಲೀಸಾಗಿ ಗೆದ್ದರು. ರಘುಪತಿ ಭಟ್ ಕೂಡಾ ತನ್ನ ಶಿಷ್ಯನ ಗೆಲುವಿಗೆ ಶ್ರಮಿಸಿದರು. ಮುಂದಿನ ಬಾರಿ ನೈಋತ್ಯ ಪದವೀದರ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಾಗಿ ವರಿಷ್ಠ ಲರು ರಘುಪತಿ ಭಟ್‌ಗೆ ಭರವಸೆ ನೀಡಿದ್ದರು. ಆದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನ ಧನಂಜಯ ಸರ್ಜಿ ಅವರನ್ನು ಅವಸರವಸರವಾಗಿ ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ನೀಡಿರುವುದು ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.
ಅದಕ್ಕೆ ಕಾರಣವೂ ಇದೆ!
ಧನಂಜಯ್ ಸರ್ಜಿ ಶಿವಮೊಗ್ಗದ ಹರ್ಷ ಕೊಲೆಯಾದಾಗ ಎಡಪಂಥೀಯರು ನಡೆಸಿದ ಶಾಂತಿಗಾಗಿ ನಡಿಗೆ ಜಾಥಾದಲ್ಲಿ ಧನಂಜಯ ಸರ್ಜಿಯೂ ಹೆಜ್ಜೆ ಹಾಕಿದ್ದರು. ಹಿಂದೂ ವಿರೋಧಿಗಳ ಜೊತೆ ಗುರುತಿಸಿಕೊಂಡ ವ್ಯಕ್ತಿಗೆ ಟಿಕೆಟ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾರ್ಯಕರ್ತರು ಜಾಲತಾಣಗಳಲ್ಲಿ ಪ್ರಶ್ನಿಸಲಾರಂಭಿಸಿದ್ದಾರೆ. ತಾನು ಆರೆಸ್ಸೆಸ್‌ನಲ್ಲಿ ಇದ್ದೆ ಎಂದು ಹೇಳುವ ಸರ್ಜಿಯವರ ಹೇಳಿಕೆ ಶುದ್ಧ ಸುಳ್ಳು. ಅವರು ಆರೆಸ್ಸೆಸ್‌ನಲ್ಲಿ ಇರಲೇ ಇಲ್ಲ ಎಂದು ಆರೋಪಿಸುತ್ತಿದ್ದಾರೆ.
ತೇಜಸ್ಚಿನಿ ಗೌಡರಂಥ ಕಾಂಗ್ರೆಸ್ ಮನಸ್ಸಿನವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ಟಿಕೆಟ್ ಸಿಗದ ಮೇಲೆ ಪಕ್ಷಾಂತರ ಮಾಡುವ ಅವಕಾಶವಾದಿಗಳ ಹಿಂದೆ ಹೋಗುವ ಬಿಜೆಪಿ ವರಿಷ್ಠರು ಕಾರ್ಯಕರ್ತರನ್ನು ತುಳಿಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿಗೂ ವ್ಯತ್ಯಾಸವಿಲ್ಲದಂತಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ.
ತುಳುನಾಡಿನಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ, ಏನು ಮಾಡಿದರೂ ನಡೆಯುತ್ತೆ ಎನ್ನುವ ವರಿಷ್ಠರ ಚಿಂತನೆಗಳಿಗೆ ಕಾರ್ಯಕರ್ತರು ಸಿಟ್ಟಾಗುತ್ತಿದ್ದಾರೆ. ಪಕ್ಷಕ್ಕೆ ಗೆದ್ದಲಿನಂತೆ ಮಣ್ಣು ಹೊತ್ತವರನ್ನು ತುಳಿದು ಎಲ್ಲಿಂದಲೋ ಬಂದ ಹಾವು ವಾಸ ಮಾಡುವಂತೆ ಕಾರ್ಯಕರ್ತರ ಸ್ಥಿತಿಗೆ ಕಣ್ಣೀರಾಗುತ್ತಿದ್ದಾರೆ. ಇದಕ್ಕೊಂದು ಸೆಡ್ಡು ಹೊಡೆಯಬೇಕೆಂದು ಬಹಳ ಸಮಯದಿಂದ ಕಾಯುತ್ತಿದ್ದರು. ಆಗ ಸಿಕ್ಕಿದವರೇ ರಘುಪತಿ ಭಟ್.
ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕೆಲಸದಲ್ಲಿ ತೊಡಗಿದ್ದ ರಘುಪತಿ ಭಟ್ಟರಲ್ಲಿ ಈ ಬಾರಿ ನೈಋತ್ಯ ಕ್ಷೇತ್ರಕ್ಕೆ ತಾವೇ ಸ್ಪರ್ಧಿಸಿ, ನಿಮ್ಮನ್ನು ಗೆಲ್ಲಿಸುತ್ತೇವೆ. ಬಿಜೆಪಿ ವರಿಷ್ಠರ ನಡೆಗೆ ಸೆಡ್ಡು ಹೊಡೆಯೋಣ ಎಂದು ಹೇಳಿ ಹುರಿದುಂಬಿಸಿ ವರಿಷ್ಠರಿಗೆ ಪಾಠ ಕಲಿಸಲು ಹೇಳಿದ್ದಾರೆ.
ದಿಕ್ಕು ತಪ್ಪುತ್ತಿರುವ ಪಕ್ಷವನ್ನು ಸರಿ ಮಾಡಲು ತನ್ನ ಸ್ಪರ್ಧೆ ಅನಿವಾರ್ಯ ಎಂದು ಅರಿತ ರಘುಪತಿ ಭಟ್ ಬಂಡಾಯ ಸಾರಿ ಈ ಬಾರಿ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಪದವೀಧರರು ಈ ಬಾರಿ ರಘುಪತಿ ಭಟ್ಟರನ್ನು ಗೆಲ್ಲಿಸಿ ಹಿಂದೂ ವಿರೋಧಿ ಎಂದು ಕರೆಸಿಕೊಂಡ ಧನಂಜಯ ಸರ್ಜಿ ಅವರನ್ನು ಸೋಲಿಸಿ ಬಿಜೆಪಿ ವರಿಷ್ಠರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಮಾತೃಪಕ್ಷ ಬಿಜೆಪಿಗೆ ಸೇರುತ್ತೇನೆ ಎನ್ನುವ ರಘುಪತಿ ಭಟ್ ಗೆಲುವಿನಿಂದ ಬಿಜೆಪಿ ವರಿಷ್ಠರು ಪಾಠ ಕಲಿಯಲಿದ್ದಾರೆ ಎನ್ನುವ ನಿರೀಕ್ಷೆ ಕಾರ್ಯಕರ್ತರದ್ದು. ಒಂದು ವೇಳೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಕಾರ್ಯಕರ್ತರು ಮುನಿಸಿಕೊಂಡು ರಘುಪತಿ ಭಟ್ಟರನ್ನು ಸ್ಪರ್ಧಿಸಲು ಸೂಚಿಸಿತ್ತಿರಲಿಲ್ಲವೋ ಏನೋ? ಆದರೆ ವರಿಷ್ಠರ ಅಹಂಕಾರಕ್ಕೆ ಈ ಬಾರಿ ಭಟ್ಟರನ್ನು ಗೆಲ್ಲಿಸಿಯೇ ಸಿದ್ಧ, ಈ ಮೂಲಕವಾದರೂ ಪಕ್ಷ ಶುದ್ಧಗೊಳ್ಳಲಿ ಎನ್ನುವ ನಿರೀಕ್ಷೆ ಕಾರ್ಯಕರ್ತರದ್ದಾಗಿದೆ.