ಮಂಗಳೂರು: ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಬಡ ಕುಟಂಬ ಸಂಕಷ್ಟಕ್ಕೆ ಸಿಲುಕಿದಾಗ ದೈವ ಆ ಕುಟುಂಬದ ಬೆನ್ನಿಗೆ ನಿಂತು, ಅಧರ್ಮದಲ್ಲಿ ನಡೆಯುವವರನ್ನು ಹೇಗೆ ಶಿಕ್ಷಿಸುತ್ತದೆ ಎನ್ನುವುದೇ ‘ಕಲ್ಜಿಜ’ ಸಿನಿಮಾದ ತಿರುಳು. ಸಿನಿಮಾದ ಕೊನೆಯಲ್ಲಿ ಕೊರಗಜ್ಜನ ಅಬ್ಬರವನ್ನು ನೋಡಿದಾಗ ಪ್ರತಿಯೊಬ್ಬರ ಭಯ, ಭಕ್ತಿ ಜಾಗೃತವಾಗುತ್ತದೆ. ದೈವಗಳ ಬಗ್ಗೆ ಅಪಹಾಸ್ಯ ಮಾಡುವವರು ಹೆದರುವಂತೆ ಮಾಡುತ್ತದೆ.
ಸಿನಿಮಾದ ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ, ಅದರಲ್ಲಿ ಬರುವ ಪಾತ್ರಗಳು ಒಂದಕ್ಕೊಂದು ಸಮ್ಮಿಳತಗೊಂಡು ಆರಂಭದಿಂದ ಕೊನೆ ತನಕ ಎಲ್ಲೂ ಬೋರ್ ಹೊಡೆಸುವುದಿಲ್ಲ.
ಹಾಗೆ ನೋಡಿದರೆ ಚಿತ್ರದಲ್ಲಿ ವಿರೋಧಾಸ ಎಲ್ಲೂ ಕಾಣುವುದಿಲ್ಲ. #ನಂಬಿಕೆಒರಿಪಾಗ ಎಂದು ಈ ಚಿತ್ರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ನಡೆಸುವವರದ್ದು ಚಿತ್ರದಲ್ಲಿ ಬರುವ ಕೊನೆಯ ಕೊರಗಜ್ಜನ ದೃಶ್ಯಕ್ಕೆ ಆಕ್ಷೇಪವಿದೆ. ಮುಂದಿನ ದಿನಗಳಲ್ಲಿ ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ಮಾದರಿ ವೇಷ ಧರಿಸಿ ವೇದಿಕೆಗಳಲ್ಲಿ ಕುಣಿದಂತೆ ಅಜ್ಜನನ್ನೂ ಕುಣಿಸಬಹುದು. ಇದರಿಂದ ತುಳುವರ ನಂಬಿಕೆಗೆ ಅಪಚಾರ ಬರಬಹುದು ಎನ್ನುವುದು ಅವರ ಆಕ್ಷೇಪ.
ಅವರ ಆಕ್ಷೇಪ ಸಹಜವಾದದ್ದೇ. ತುಳುವಿನ ಧಾರ್ಮಿಕ ವಿಚಾರಗಳು, ನಂಬಿಕೆ ವಿಡಂಬನೆಗೊಂಡು ತುಳು ಸಂಸ್ಕೃತಿ ಅವನತಿ ಹೊಂದಬಹುದು ಎನ್ನುವುದು ಅವರ ಭಯ. ಈ ಭಯ ಅವರದ್ದು ಮಾತ್ರವಲ್ಲ ಸಮಸ್ತ ತುಳುವರದ್ದೂ ಆಗಿದೆ. ಆದರೆ ಈ ಚಿತ್ರವನ್ನು ನೋಡದೆ ಆಕ್ಷೇಪಿಸುವುದು ತಪ್ಪು.
ಇಂದು ದೈವದ ಕೊಡಿಯಡಿಯಲ್ಲಿ ನಡೆಯುವ ಕೆಲವು ಕೋಲಗಳಲ್ಲು ಕೂಡಾ ಅಪಚಾರ ನಡೆಯುತ್ತಿದೆ. ನಾದಸ್ವರ ನುಡಿಸುವವನು ಹಿಟ್ ಸಿನಿಮಾಗಳ ಹಾಡನ್ನು ನುಡಿಸಿ ದೈವವನ್ನು ಕುಣಿಸುವುದನ್ನು ಕಾಣಬಹುದು. ಕೋಲ ಸಾಂಪ್ರದಾಯಿಕವಾಗಿ ನಡೆಯುವ ಬದಲು ಬ್ಯಾಂಡ್ ತಮಟೆಗಳನ್ನು ಡಬಡಬ ಢಲ್ ಡಳ್ ಬಡಿಯುವುದು, ಚೆಂಡೆ, ಚೈಲೆ ಬಡಿಯುವುದು, ಕೊಳಲು ಊದುವುದು ಛೆ ಛೆ. ಕೋಲಗಳು ಧಾರ್ಮಿಕ ಚಟುವಟಿಕೆಯ ಬದಲು ಆಡಂಬರದ ಡ್ಯಾನ್ಸ್ ಮಾದರಿ ಪರಿವರ್ತನೆಗೊಂಡಿದೆ.
ದೈವಗಳಿಗೆ ಹಾಕುವ ಬಣ್ಣ ಕೂಡಾ ಇಂದು ಮೇಕಪ್‌ನಂತೆ ಬದಲಾಗಿದೆ. ಇಂದು ದೈವದ ಮುಖವರ್ಣಿಗಳು ಪೌರಾಣಿಕ ಸಿನಿಮಾದಲ್ಲಿ ಬರುವ ಪಾತ್ರಗಳ ರೀತಿ ಬದಲಾಗಿದೆ. ಇದರ ಬಗ್ಗೆ ಹೇಳಿದ್ರೆ ತುಂಬಾ ಇದೆ. ಆಡಂಬರದಿಂದ ನಡೆಯುವ ಕೋಲ, ನೇಮಗಳನ್ನು ನೋಡಿದ್ರೇ ಇದು ಅಂದಾಜಾಗುತ್ತದೆ. ಇವುಗಳನ್ನು ನೋಡಿ ನಮ್ಮ ಹಿರಿಯರು ಎಷ್ಟು ನೊಂದಿರಬಹುದು?
ಕಲ್ಜಿಗದಲ್ಲಿ ದೈವದ ನಿಂದನೆಯ ಬದಲು ವಂದನೆ ಇದೆ. ದೈವಗಳ ಕಾರಣಿಕವನ್ನು ಸಿನಿಮಾಗಳ ಮೂಲಕ ತೋರಿಸಿದರೆ ತುಳುನಾಡಿನ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಹೋಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ಯಕ್ಷಗಾನದಲ್ಲು ಕಾರಣಿಕದ ಕಲ್ಲುರ್ಟಿ, ಮಹಿಮೆದ ಮಂತ್ರದೇವತೆ ಮುಂತಾದ ಪ್ರಸಂಗಗಳನ್ನು ಆಡಿಸಲಾಗುತ್ತಿದೆ. ನಾಟಕಗಳಲ್ಲೂ ದೈವಗಳ ಕಾರಣಿಕವನ್ನು ತೋರಿಸಲಾಗಿದೆ.
ದೈವಗಳ ಸಿನಿಮಾ ಮಾಡುವಾಗ ನಿರ್ಮಾಪಕರು ಮೊದಲು ದೈವದ ಅಪ್ಪಣೆ ಕೇಳಿರುತ್ತಾರೆ. ಕಾಂತಾರದಲ್ಲೂ ಕೇಳಲಾಗಿತ್ತು. ದೈವ ಅಪ್ಪಣೆ ಕೊಟ್ಟ ಮೇಲೆಯೇ ದೈವದ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಒಂದು ವೇಳೆ ದೈವಗಳಿಗೆ ಇಷ್ಟವಿಲ್ಲದಿದ್ದರೆ ಆ ಚಿತ್ರಗಳು ತೆರೆ ಕಾಣುವುದು ಬಿಡಿ ಶೂಟಿಂಗ್ ಮಾಡಲು ಸಹ ಸಾಧ್ಯವಿಲ್ಲ. ಯಾಕೆಂದರೆ ದೈವಗಳ ಶಕ್ತಿ ಅಂತದ್ದು. ದೈವಗಳ ಅಪ್ಪಣೆ ಪಡೆಯದೆ ಸಿನಿಮಾ ನಿರ್ಮಿಸಲು ಹೋದ ಚಿತ್ರಗಳು ಅರ್ಧದಲ್ಲಿಯೇ ನಿಂತುಹೋದ ಅನೇಕ ನಿದರ್ಶಗಳಿವೆ.
ಇದೀಗ ಎಲ್ಲವನ್ನೂ ಮಾತಾಡಬೇಕಿದೆ. ಮಾತ್ರವಲ್ಲ ಅದಕ್ಕೆ ಸಮಯವೂ ಬಂದಿದೆ. ಇದಕ್ಕೆ ಕಲ್ಜಿಗ ಸಿನಿಮಾ ನಾಂದಿ ಹಾಡಿದೆ.