ಮಂಗಳೂರು; ಯಾವ ಪೊಲೀಸ್ ಅಧಿಕಾರಿ ಜನಮಾನಸದಲ್ಲಿ ಚಿರಸ್ಥಾಯಿಯಾಗುವಂಥ ಹೆಸರು ಸಂಪಾದಿಸುತ್ತಾನೋ, ಅಂತ ಅಧಿಕಾರಿಗೆ ವನವಾಸ ಅಥವಾ ಅಜ್ಞಾತವಾಸ ತಪ್ಪಿದ್ದಲ್ಲ. ನೊಣ ಹೊಡೆದುಕೊಂಡು ಕೂರುವಂಥ ನಾನ್ ಎಕ್ಸಿಕ್ಯುಟೀವ್ ಹುದ್ದೆ ಪ್ರಾಪ್ತಿಸಿ ಅವಮಾನಿಸುವುದು ಯಾವುದೇ ಆಳುವ ಸರ್ಕಾರಕ್ಕಂಟಿದ ಪ್ರಾರಬ್ಧ. ಆದರೆ ಕಾನೂನು ಸುವ್ಯವಸ್ತೆಯೇ ಹಳ್ಳ ಹಿಡಿದಿದ್ದ ಒಂದು ನಗರ ಪ್ರದೇಶದಲ್ಲಿ ಶಾಂತಿ, ನೆಮ್ಮದಿ ತಂದುಕೊಟ್ಟ, ಕೈ-ಬಾಯಿ ಶುದ್ಧವಿಟ್ಟುಕೊಂಡು ಕೆಲಸ ಮಾಡುತ್ತಿರುವ, ಕೆಳಗಿನ ಅಧಿಕಾರಿಗಳಿಗೆ ಕಾನೂನಿನ ನೀತಿಪಾಠ ಹೇಳಿಕೊಟ್ಟು, ಶ್ರದ್ಧೆಯಿಂದ ಜವಾಬ್ದಾರಿ ನಿರ್ವಹಿಸುವ ದಾರಿ ತೋರಿದ ಒಬ್ಬ ಅಧಿಕಾರಿಯ ವರ್ಗಾವಣೆಗೆ ಪಟ್ಟಭದ್ರ ಹಿತಾಸಕ್ತಿಗಳು ಧ್ವನಿಯೆತ್ತುತ್ತಾರೆಂದರೆ ಏನರ್ಥ? “ಕಮೀಷನರ್ ಅಟಾವೋ” ಎಂದು ಕೂಗು ಹಾಕುತ್ತಾರೆಂದರೆ ಏನಿದರ ಮರ್ಮ? ಅತ್ಯಂತ ನಿಷ್ಠುರಿ, ಕರ್ತವ್ಯ ನಿಷ್ಠ ಪೊಲೀಸ್ ಅಧಿಕಾರಿಯೆಂದೇ ಖ್ಯಾತಿ ಸಂಪಾದಿಸಿರುವ, ಸರ್ವೀಸಿನುದ್ದಕ್ಕೂ ತಮ್ಮ ಖಡಕ್ಕಾದ ಪೊಲೀಸ್ ಗಿರಿಯಿಂದ ಗುರುತಿಸಿಕೊಂಡ, ಹೃದಯ ವೈಶಾಲ್ಯತೆಯಿಂದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದ ಪೊಲೀಸ್ ಅಧಿಕಾರಿ ವಿರುದ್ಧವೇ ಬೀದಿಗಿಳಿಯುತ್ತಾರೆ ಎಂದರೆ ಅದ್ಯಾರ ಕುತಂತ್ರ? ಪಟ್ಟಭದ್ರ ಹಿತಾಸಕ್ತಿಗಳಿಗೆ ಅಧಿಕಾರಿ ಕಾನೂನು ಮೀರಿ ಸ್ಪಂದಿಸದಿದ್ದರೆ, ಆತ ಪ್ರಾಮಾಣಿಕನೂ ಜನಪರನೂ ಆದನೆಂದರೆ ಸದಾ ವನವಾಸ ಅಥವಾ ಅಜ್ಞಾತವಾಸ ತಪ್ಪಿದ್ದಲ್ಲವೆ? ಇಂಥಾ ಪ್ರಶ್ನೆಗಳು ಧುತ್ತೆಂದು ಜನಮಾನಸದಲ್ಲಿ ಎದ್ದುನಿಲ್ಲಲು ಕಾರಣ “ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅಟಾವೋ” ಎಂಬ ದಾರಿಹೋಕರ ಕೂಗು!
ಅನುಪಮ್ ಅಗರ್ವಾಲ್. ಮಂಗಳೂರು ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿರುವಂಥ ಐಪಿಎಸ್ ಅಧಿಕಾರಿ. ಮೂಲತಃ ರಾಜಸ್ಥಾನದವರಾದ ಇವರು ರಾಮನಗರ, ವಿಜಯಪುರ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಈಶಾನ್ಯ ವಲಯದ ಡಿಐಜಿ, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಮಂಗಳೂರು ಪೊಲೀಸ್ ಆಯುಕ್ತರಾಗಿರುವ ಅನುಪಮ್ ಅಗರ್ವಾಲ್, ಅಶಾಂತಿ-ಅಕ್ರಮಗಳ ಧ್ಯೋತಕವಾಗಿದ್ದ ನಗರದಲ್ಲಿ ಶಾಂತಿ-ನೆಮ್ಮದಿಗೆ ನಾಂದಿ ಹಾಡಿದ್ದಾರೆ. ಸರ್ಕಾರಿ ಕೆಲಸ ದೇವರ ಕೆಲಸ ಎಂಬ ನಾಣ್ನುಡಿಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲಾಖೆಗೆ ಗೌರವ ತಂದಿದ್ದಾರೆ. ಈಗ್ಗೆ ಒಂದೂಕಾಲು ವರ್ಷದ ಹಿಂದೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಹುದ್ದೆಗೆ ಬಂದ ಅನುಪಮ್ ಅಗರ್ವಾಲ್, ನಗರದಲ್ಲಿ ನಾಯಿಕೊಡೆಯಂತೆ ಬೀಡುಬಿಟ್ಟಿದ್ದ ಡ್ರಗ್ಸ್ ದಂಧೆ ಮಟ್ಟ ಹಾಕಿದ್ದಾರೆ. ಸಾರ್ವಜನಿಕರ ಬಳಿ ಸೌಹಾರ್ದವಾಗಿ ನಡೆದುಕೊಂಡು, ಉತ್ತಮ ರೀತಿಯ ಜನ ಸಂಪರ್ಕ ಇಟ್ಟುಕೊಂಡಿದ್ದಾರೆ. ಮನೆ ದರೋಡೆ ಜೊತೆಗೆ ನಿಕೃಷ್ಟವಾಗಿ ಮನೆಮಂದಿಯ ಹತ್ಯೆಗೈಯುತ್ತಿದ್ದ ಚಡ್ಡಿಗ್ಯಾಂಗ್ ಜೈಲು ಸೇರುವಂತೆ ಮಾಡಿದ್ದಾರೆ. ಒಟ್ಟಾರೆ ಅತ್ಯಂತ ಕ್ಲಿಷ್ಟಕರವಾದ ದರೋಡೆ-ಡಕಾಯಿತಿ ಹಾಗೂ ಅಪರಾಧ ಪ್ರಕರಣಗಳ ಭೇದಿಸುವಲ್ಲಿ ಅಗರ್ವಾಲ್ ಮತ್ತು ಅವರ ತಂಡದ ಪಾತ್ರ ದೊಡ್ಡದಿದೆ.
ಡ್ರಗ್ಸ್ ದಂಧೆಗೆ ಕಡಿವಾಣ!
ಅಂದಹಾಗೆ ಕಮೀಷನರ್ ಅಗರ್ವಾಲ್ ಮೇಲೆ
ಯಾವುದೇ ಆರೋಪಗಳು ಕೇಳಿ ಬಂದಿಲ್ಲ. ತಮ್ಮ ಕೈ ಅಶುದ್ಧ ಮಾಡಿಕೊಂಡ ನಿದರ್ಶನಗಳಿಲ್ಲ. ಮಂಗಳೂರಿನಲ್ಲಿ ದೊಡ್ಡ ಪಿಡುಗಾಗಿರುವ ಡ್ರಗ್ಸ್ ದಂಧೆಗೆ ಕಡಿವಾಣದ ಲಂಗರು ಹಾಕಿದವರು ಅಗರ್ವಾಲ್ ಅಂತಂದರೆ ಅತಿಶಯೋಕ್ತಿಯಲ್ಲ. ಹೊರ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆಂದು ಮಂಗಳೂರಿಗೆ ಬರುವ ಕೆಲವು ವಿದ್ಯಾರ್ಥಿಗಳು ಮತ್ತವರ ಪೋಷಕರು ಭವಿಷ್ಯದ ಕನಸು ಹೊತ್ತಿರುತ್ತಾರೆ. ಹಾಗೆ ಬಂದವರು ಕೆಲವರ ಚಟಾಸಕ್ತಿಯ ಫಲದಿಂದ ಡ್ರಗ್ಸ್ ಎಂಬ ಕೂಪಕ್ಕೆ ಸಿಲುಕುತ್ತಾರೆ. ಅಂಥವರ ಚಟ ಪೂರೈಸಲೆಂದೇ ದೊಡ್ಡ ಮಟ್ಟದ ಡ್ರಗ್ಸ್ ಜಾಲ ಮಂಗಳೂರಿನಲ್ಲಿ ಬೇರೂರಿದೆ. ವಿದ್ಯಾರ್ಥಿಗಳಿಗೆ ನಶೆಯ ಅಮಲೇರಿಸಿ ತಾವು ಕಾಸು ಮಾಡಿಕೊಂಡು ಅವ್ಯಾಹತವಾಗಿ ಬೆಳೆದು ನಿಂತಿದ್ದ ದಂಧೆಗೆ ನಿಜಕ್ಕೂ ಕಡಿವಾಣ ಹಾಕಿದವರೇ ಅನುಪಮ್ ಅಗರ್ವಾಲ್. ಹಲವು ವರ್ಷಗಳಿಂದ ಸಾಕಷ್ಟು ಅನಾಹುತಗಳನ್ನೇ ಸೃಷ್ಟಿಸಿದ್ದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ ಅಗರ್ವಾಲ್, ಸುಮಾರು 20% ಡ್ರಗ್ಸ್ ದಂಧಾಕೋರರ ಊರು ಬಿಡಿಸಿದ್ದಾರೆ. ಇಂಥಾ ಅಧಿಕಾರಿನ ಉಳಿಸಿಕೊಳ್ಳುವುದು ಮಂಗಳೂರು ನಗರದ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಕರ್ತವ್ಯ ಹಾಗೂ ಜವಾಬ್ದಾರಿಯಲ್ಲವೆ?
ಉತ್ತಮ ಪೊಲೀಸಿಂಗ್!
ಆದರೆ ಯಾವುದೋ ಒಂದು ಹೋರಾಟಕ್ಕೆ ಅನುಮತಿ ನೀಡಲಿಲ್ಲವೆಂದು, ತಮ್ಮ ಬೇಳೆ ಬೇಯ್ಯಿಸಿಕೊಳ್ಳಲು ಅವಕಾಶ ಕೊಡಲಿಲ್ಲವೆಂದು, ಕಮಿಷನರ್ ಅಗರ್ವಾಲ್ ಅಟಾವೋ ಅಂತಂದರೆ ಸರಿಯೆ? ಅಧಿಕಾರಿಗೆ ವರ್ಗಾವಣೆ ಶಾಪ ಅಂಟಿಸುವ ಮೂಲಕ ಹೆಸರು ಕೆಡಿಸುವುದು ನ್ಯಾಯಸಮ್ಮತವೆ? ಹಿಂದೆ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಆಗಿದ್ದವರ ಪೈಕಿ ಒಂದಿಬ್ಬರು ಬಿಟ್ಟರೆ, ಮಿಕ್ಕವರೆಲ್ಲರೂ ಉತ್ತಮ ಪೊಲೀಸಿಂಗ್ ನಿರ್ವಹಿಸಿದ್ದಾರೆ. ಪೊಲೀಸ್ ಇಲಾಖೆಗೆ ಗೌರವ ತಂದಿದ್ದಾರೆ. ಅಂಥವರ ಸಾಲಿನಲ್ಲಿ ಅನುಪಮ್ ಅಗರ್ವಾಲ್ ಹೆಸರು ಖಂಡಿತಾ ಎದ್ದು ಕಾಣುತ್ತದೆ. ಇಂಥಾ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ವರ್ಗಾವಣೆ ಮಾಡಬೇಕೆಂದು ಕೂಗೆಬ್ಬಿಸಿರುವವರ ಹಕೀಕತ್ತೇನು? ಹಾಗಂಥ ಸಿಎಂ ಸಿದ್ದರಾಮಯ್ಯ ವರ್ಗಾವಣೆಯ ಕೆಲಸಕ್ಕೆ ಕೈಹಾಕಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ವರ್ಗಾವಣೆ ಸಾಧ್ಯತೆ ತಳ್ಳಿಹಾಕಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಸರ್ವಧರ್ಮ ಪಾಲಕರು. ಎಲ್ಲಾ ಧರ್ಮದ ಜನರೊಂದಿಗೆ ಉತ್ತಮ ಬಾಂಧವ್ಯ ವಿರಿಸಿಕೊಂಡಿದ್ದಾರೆ. ಅನುಪಮ್ ಅಗರ್ವಾಲ್ ಕರ್ಯದಕ್ಷತೆ ಅವರಿಗೆ ಗೊತ್ತಿರುವುದರಿಂದಲೇ ವರ್ಗಾವಣೆಗೆ ವಿರೋಧಿಸಿದ್ದಾರೆ. ಮಾಜಿ ಸಚಿವ ರಮಾನಾಥ್ ರೈರಂಥವರು ಅಗರ್ವಾಲ್ ವರ್ಗಾವಣೆಯ ಕೂಗೆಬ್ಬಿಸಿರುವವರ ಪರವಾಗಿದ್ದಾರೆ. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ವಿರುದ್ಧ ಮಸಲತ್ತು ಮಾಡುವವರ ವಿರುದ್ಧ ಸೆಟೆದು ನಿಂತು, ನಿಷ್ಠುರಿ ಅಗರ್ವಾಲ್ ಪರ ಧ್ವನಿ ಎತ್ತಬೇಕಾಗಿರುವುದು ಸಾರ್ವಜನಿಕರ ಕರ್ತವ್ಯವಲ್ಲವೆ?