ಮಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮೂಡಾ ಹಗರಣದ ದೂರು ದಾರ ಸ್ನೇಹಮಯಿ ಕೃಷ್ಣ, RTI ಕಾರ್ಯಕರ್ತ ಗಂಗರಾಜು ಮತ್ತು ಇತರ ಮೂವರ ಮೇಲೆ ವಾಮಾಚಾರ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ದಂಪತಿಗೆ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ತನಿಖೆ ನಡೆಸಲು ನೊಟೀಸ್ ನೀಡಲಾಗಿದ್ದರೂ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಸಾದ್ ಅತ್ತಾವರ ಮತ್ತು ಉಡುಪಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಅವರ ಪತ್ನಿ ಇಬ್ಬರೂ ತನಿಖೆಗೆ ಸಹಕರಿಸುತ್ತಿಲ್ಲ. ಪ್ರಸಾದ್ ಅತ್ತಾವರ ಅವರು ಬಳಸಿರುವ ವಸ್ತುಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆ ನಡೆಸಲಾಗುತ್ತಿದೆ. ಪ್ರಸಾದ್ ಹೃದಯ ಸಂಬಂಧಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ವಿಚಾರಣೆ ನಡೆಸಲಾಗಿತ್ತು. ಆ ಬಳಿಕ ಅವರಿಗೆ ಜಾಮೀನು ಸಿಕ್ಕಿ, ಬಿಡುಗಡೆಗೊಂಡಿದ್ದರು ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅವರ ಪತ್ನಿ ಸಹ ಕೆಲಸಕ್ಕೆ ರಜೆ ಹಾಕಿ, ಮೊಬೈಲ್ ಸ್ವಿಚ್‌ಆಫ್ ಮಾಡಿ ತಲೆಮರೆಸಿಕೊಂಡಿದ್ದಾಗಿ ಆಯುಕ್ತರು ಹೇಳಿದ್ದಾರೆ.
ಬಿಜೈನ ಸಲೂನ್ ಒಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದ ಹಾಗೆ ಅತ್ತಾವರ ಅವರನ್ನು ಬಂಧಿಸಿ, ಅವರ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ದೇಗುಲವೊಂದರಲ್ಲಿ ಕುರಿಗಳನ್ನು ಬಲಿ ನೀಡಿ, ಅವುಗಳ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಇತರರ ಫೋಟೋ – ಹೆಸರಿನ ಮೇಲೆ ಹಚ್ಚಿ ಪೂಜೆ ಮಾಡುತ್ತಿದ್ದ ವಿಡಿಯೋ ಲಭ್ಯವಾಗಿತ್ತು. ಅದರಂತೆ ಪ್ರಕರಣ ದಾಖಲಾಗಿತ್ತು.