ಮಂಗಳೂರು: ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ನಾಪತ್ತೆಯಾಗಿ ಐದು ದಿನಗಳಾಗಿವೆ. ಈವರೆಗೂ ಬಾಲಕನ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಇಂದು ಫರಂಗಿಪೇಟೆಯನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿದವು.
ಹಿಂದೂ ಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಫರಂಗಿಪೇಟೆ ಪರಿಸರದಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು, ಬಿಜೆಪಿಗರಿಗೆ ಭದ್ರತೆಯೇ ಇಲ್ಲವಾಗಿದೆ. ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು ಎಂದು ಹೇಳಿದೆ.
ಈಗ ಬಾಲಕ ನಾಪತ್ತೆಯಾಗಿ ಐದು ದಿನಗಳೇ ಕಳೆದಿದ್ದು, ಈವರೆಗೂ ಆತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನೆರಡು ದಿನಗಳಲ್ಲಿ ದಿಗಂತ್ ಕುರಿತ ಮಾಹಿತಿ ದೊರೆಯದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯ ಕಾವು ಜಿಲ್ಲೆಯಾದಂತ ಹಬ್ಬಲಿರುವ ಎಚ್ಚರಿಕೆಯನ್ನು ಸಹ ಹಿಂದೂ ಸಂಘಟನೆಗಳು ನೀಡಿವೆ.
ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಭೇಟಿ ನೀಡಿದ್ದು, ಪ್ರಕರಣ ನಡೆದ ಸಮಯದಲ್ಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರಂಭದಲ್ಲಿ ಅವರು ನಿರ್ಲಕ್ಷ್ಯ ತೋರಿದ್ದಾರೆ. ನಾಪತ್ತೆಯಾದವನ ಮಾಹಿತಿ ಈ ವರೆಗೂ ಲಭ್ಯವಾಗಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದೆಗೆಟ್ಟಿರುವುದೇ ಇದಕ್ಕೆ ಮುಖ್ಯ ಕಾರಣ. ಜಿಲ್ಲೆಯಾದ್ಯಂತ ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ಇದಕ್ಕೆ ಕಾರಣ ಎಂದು ಅವರು ಕಿಡಿ ಕಾರಿದ್ದಾರೆ.