ಕೊಪ್ಪಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆ ದಂಧೆಕೋರರು ಹಲ್ಲೆ ನಡೆಸಿದ ಘಟನೆ ಚಿಕ್ಕ ಸಿಂದೋಗಿ ಸಮೀಪ ನಡೆದಿದೆ.
ಇಲಾಖೆಯ ಸಿಬ್ಬಂದಿ ಸಚಿನ್ ಗೌರಿಪುರ ಎಂಬವರ ಮೇಲೆ ಹಲ್ಲೆ ನಡೆದಿರುವುದಾಗಿದೆ. ಗಾಯಾಳು ಸಿಬ್ಬಂದಿಯೂ ಸೇರಿದಂತೆ ಒಟ್ಟು ಮೂರು ಮಂದಿ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ತಡೆಯುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಎಂಟು ಮಂದಿ ದಂಧೆಕೋರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಅಕ್ರಮವಾಗಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಅದನ್ನು ತಡೆದು ಮರಳು ಅನ್‌ಲೋಡ್ ಮಾಡುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಈ ವೇಳೆ ಅಲ್ಲೇ ಮರಳು ತುಂಬುತ್ತಿದ್ದ ಇತರ ಎಂಟು ಜನರು ಇಲಾಖೆಯ ಸಿಬ್ಬಂದಿ ಸಚಿನ್ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ಅಸ್ವಸ್ಥರಾದ ಸಚಿನ್ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಇಲಾಖೆಯ ಹಿರಿಯ ಭೂವಿಜ್ಞಾನಿ ರಶೀದ್ ಅವರು ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.