ಮಂಗಳೂರು: ಉಡುಪಿಯ ಸಮಾರಂಭವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸಮಸ್ಯೆಯನ್ನು ಆಲಿಸಿದ ಪುತ್ತೂರು ಶಾಸಕ ಅಶೋಕ್ ರೈ ಆ ಹುಡುಗನಿಗೆ ಮಾನವೀಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಘಟನೆಯನ್ನು ಶಾಸಕ ಅಶೋಕ್ ರೈ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾರ್ಮಿಕವಾಗಿ ವಿವರಿಸಿ, ಆ ಹುಡುಗನೊಂದಿಗೆ ಫೋಟೋಗೆ ಪೋಸ್ ನೀಡಿ ಶೇರ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ? ;
“ಉಡುಪಿಯ ಸಮಾರಂಭವೊಂದರಲ್ಲಿ ಸಿಕ್ಕಿದ ಹದಿಹರೆಯದ ಯುವಕ”
ಮದುವೆ, ಗೃಹಪ್ರವೇಶ ಮುಂತಾದ ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಬಹುತೇಕ ನನ್ನ ರಾಜಕೀಯವನ್ನು ಪಕ್ಕಕ್ಕೀಡುತ್ತೇನೆ. ಹಾಗಂತ ಅಲ್ಲೂ ಕೂಡಾ ನನ್ನ ಕಣ್ಣುಗಳು ಸುಮ್ಮನಿರುವುದಿಲ್ಲ… ಯಾವಾಗಲೂ ನನ್ನ ಸುತ್ತಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತದೆ… ಹೃದಯದಲ್ಲಿನ ಸಾಮಾಜಿಕ ಮಿಡಿತ ಕಡಿಮೆ ಆಗುವುದಿಲ್ಲ…. ಹೀಗಾಗಿಯೇ ಮೆದುಳು ಸದಾ ಜಾಗೃತವಾಗಿ ಕಾರ್ಯತತ್ಪರವಾಗಿರುತ್ತದೆ….
ಮೊನ್ನೆ ಉಡುಪಿಯಲ್ಲಿ ಇಂಥದ್ದೇ ಖಾಸಗಿ ಸಮಾರಂಭ ಒಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಾಮೂಲಿನಂತೆ ಕಾರ್ಯಕ್ರಮದಲ್ಲಿ ಇಷ್ಟಮಿತ್ರರನ್ನು, ಪರಿಚಯದವರನ್ನು ಭೇಟಿಯಾಗುವುದು, ಉಭಯ ಕುಶಲೋಪರಿ ವಿಚಾರಿಸುವುದು ಇತ್ಯಾದಿಗಳೆಲ್ಲ ಆದ ಬಳಿಕ ಆಪ್ತರ ಜೊತೆಗೂಡಿ ಭೋಜನವನ್ನೂ ಸವಿದೆ.
ಬಳಿಕ ಊಟ ಮಾಡಿದ ತಟ್ಟೆಯನ್ನು ಇಟ್ಟು ಕೈತೊಳೆಯಲೆಂದು ಹೊರಟಾಗ ಈ ಹುಡುಗ ನನ್ನ ಕಣ್ಣಿಗೆ ಬಿದ್ದ… ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾಗಿದ್ದ ಹುಡುಗ ಅತಿಥಿಗಳು ಊಟ ಮಾಡಿದ ತಟ್ಟೆಗಳನ್ನು ಎತ್ತಿಕೊಂಡು ಹೋಗಿ ತೊಳೆಯುತ್ತಿದ್ದ…. ಯಾಕೋ ಆ ದೃಶ್ಯ ನೋಡಿ ಮನಸು ಭಾರವಾಯಿತು. ಯಾರು ಹೆತ್ತ ಮಗನೋ…. ಮನೆಯಲ್ಲಿ ಅದೆಂಥಾ ಕಷ್ಟವಿದೆಯೋ…. ಕಾಲೇಜು ಕಲಿಯುವ ವಯಸ್ಸಿನಲ್ಲಿ ಇಲ್ಲಿ ಬಂದು ಎಂಜಲು ತಟ್ಟೆ ತೊಳೆಯುತ್ತಿದ್ದಾನಲ್ಲಾ ಅನ್ನಿಸಿ ಮನಸಿಗೆ ಒಂಥರಾ ಕಸಿವಿಸಿ ಎನಿಸಿತು.
ಸೀದಾ ಆ ಹುಡುಗನ ಬಳಿಗೆ ಹೋಗಿ ಮಾತನಾಡಿಸಿದೆ…. ಅವನ ಹೆಸರು ಮನೆಯ ಪರಿಸ್ಥಿತಿ, ಕಷ್ಟಗಳ ಬಗ್ಗೆ ತಿಳಿದುಕೊಂಡೆ… ( ಆ ಬಗೆಗಿನ ವಿವರಗಳು ಇಲ್ಲಿ ಅನಗತ್ಯ ಅಂತ ಭಾವಿಸುತ್ತೇನೆ) ಅವನ ಮುಂದಿನ ಶಿಕ್ಷಣಕ್ಕೆ ಅದ್ಯಾವ ರೀತಿಯ ಸಹಾಯ ಬೇಕಾದರೂ ಮಾಡುತ್ತೇನೆ ಅನ್ನುವ ಭರವಸೆ ನೀಡಿ ಅವನ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮಾತನಾಡಿದೆ… ಹುಡುಗನ ಮುಖದಲ್ಲಿ ಆ ಕ್ಷಣ ಮೂಡಿದ ಮಂದಹಾಸವನ್ನು ನಾನ್ಯಾವತ್ತೂ ಮರೆಯಲಾರೆ….
ಆ ಹುಡುಗನಿಗೆ ನನ್ನ ಫೋನ್ ನಂಬರ್ ನೀಡಿ… ಅವನ ಜೊತೆಗೊಂದು ಫೋಟೋ ಕ್ಲಿಕ್ಕಿಸಿ ಮತ್ತೆ ಪುತ್ತೂರಿಗೆ ಹೊರಡಲು ಕಾರು ಹತ್ತಿದಾಗ ಮನಸಿಗೇನೋ ಒಂದು ರೀತಿಯ ತೃಪ್ತಿ….. ಸಮಾರಂಭದಲ್ಲಿ ಸ್ನೇಹಿತರ ಜೊತೆಗೆ ಸವಿದ ಭೋಜನಕ್ಕಿಂತಲೂ ಒಂದು ತೂಕ ಹೆಚ್ಚಿನ ತೃಪ್ತಿ…..
ಆ ಚಿಗುರು ಮೀಸೆಯ ಯುವಕ ಯಾವತ್ತು ನನಗೆ ಕರೆ ಮಾಡುತ್ತಾನೋ ಎಂಬ ನಿರೀಕ್ಷೆಯಲ್ಲಿ…. ಅವನಿಗೆ ನನ್ನ ಕೈಯಲ್ಲಾದ ಸಹಾಯ ಮಾಡುವ ಅಪೇಕ್ಷೆಯಲ್ಲಿ.’
ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಕೊಡಗೈ ದಾನಿ:
ಅಶೋಕ್ ರೈ ಅವರ ಮಾನವೀಯ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಶೋಕ್ ರೈ ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದು, ಪಕ್ಷಭೇದ, ಜಾತಿ, ಧರ್ಮ ನೋಡದೆ ನೆರವಿನ ಹಸ್ತ ಚಾಚುತ್ತಾ ಬರುತ್ತಿದ್ದಾರೆ. ರೈ ಎಸ್ಟೇಟ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅಶೋಕ್ ಕುಮಾರ್ ಕಷ್ಟದಲ್ಲಿರುವ ಮಂದಿಯ ಕಣ್ಣೀರೊರೆಸುವ ಕೆಲಸವನ್ನು 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಸಾವಿರಾರು ಮನೆಗಳಿಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದು, ಸುಮಾರು 15,800ಕ್ಕೂ ಅಧಿಕ ಮನೆಗಳಿಗೆ ನೇರವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. 15 ಸಾವಿರದಿಂದ 26
ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡಿದ್ದಾರೆ. ಅದರ ಜೊತೆ ಬಡವರಿಗೆ ಅನ್ನದಾನದಲ್ಲೂ ತೊಡಗಿದ್ದಾರೆ. ಟ್ರಸ್ಟ್ ವತಿಯಿಂದ ಈತನಕ ನೂರಾರು ಕುಟುಂಬಗಳಿಗೆ ವಾಸಕ್ಕೆ ಯೋಗ್ಯ ಮನೆ ನಿರ್ಮಿಸಿ ಕೊಡಲಾಗಿದೆ. 400 ಮಂದಿಗೆ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗಿದೆ. 1ಸಾವಿರದಷ್ಟು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿ, ಟೈಲರಿಂಗ್ ಯಂತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಬಡವರ ಮನೆಯ ಹೆಣ್ಮಕ್ಕಳಿಗೆ ಹಣಕಾಸು ನೆರವು ನೀಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 44 ಗ್ರಾಮಗಳಲ್ಲಿ ಇರುವ ಅಡಿಕೆ ಕೊಯ್ಯುವರು, ಬುಟ್ಟಿ ಹೆಣೆಯುವವರು, ದೀರ್ಘ ಕಾಲದಿಂದ ಮಲಗಿದಲ್ಲೇ ಇರುವ ರೋಗಿಗಳನ್ನು ಆರೈಕೆ ಮಾಡುವವರು, ನಾಟಿ ವೈದ್ಯರು, ಉತ್ತಮ ಸೇವೆ ನೀಡುವ ಅಂಚೆ ಪಾಲಕರು, ಮೆಸ್ಕಾಂ ಉದ್ಯೋಗಿಗಳು, ಉತ್ತಮ ಹೈನುಗಾರಿಕೆ ನಡೆಸುತ್ತಿರುವ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ಅಶೋಕ್ ರೈ ಇತ್ತೀಚೆಗೆ ಬೆಂಗಳೂರಿನಲ್ಲಿ ಕಂಬಳ ನಡೆಸಿ ಯಶಸ್ವಿಯಾಗಿದ್ದರು. ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.