ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದವೀಧರ ಮತದಾರರಿಗೆ ಎಣ್ಣೆ ಪಾರ್ಟಿ ನೀಡಿದ್ದಾರೆಂದು ಕೆಲವು ದಿನಗಳ ಹಿಂದೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ವಿಡಿಯೋ ಒಂದು ವೈರಲ್ ಅಗಿದ್ದು, ಅದರಲ್ಲಿ ಒಂದಷ್ಟು ಮಂದಿ ಗುಂಡು ತುಂಡು ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ.
ಶಿವಮೊಗ್ಗದ ಪ್ರಖ್ಯಾತ ಕ್ಲಬ್ ಒಂದರಲ್ಲಿ ಈ ಪಾರ್ಟಿ ನಡೆದಿದ್ದು, ಇದನ್ನು ಆಯೋಜಿಸಿದವರು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹೊರಗಡೆ ನಿಂತಿರುವ ಒಂದು ಕಾರಿನ ನಂಬರನ್ನು ಸರ್ಕಲ್ ಮಾಡಿ ತೋರಿಸಲಾಗಿದೆ.
ಪಾರ್ಟಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಕೈಯಲ್ಲಿ ಬಿಯರ್ ಬಾಟ್ಲಿ ಇನ್ನು ಕೆಲವರು ಆಲ್ಕೋಹಾಲ್ ಕುಡಿಯುತ್ತಾ ಬಿರಿಯಾನಿ, ಮಾಂಸ ಜಗಿಯುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ..
ಮತದಾನದ ಮುಂಚೆ ಈ ರೀತಿ ಪಾರ್ಟಿ ಆಯೋಜಿಸಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ. ಆರೆಸ್ಸೆಸ್ ಸಿದ್ಧಾಂತ ಹೊಂದಿರುವವರು ಈ ರೀತಿ ಪಾರ್ಟಿ ಮಾಡಿರುವುದು ಎಷ್ಟು ಸರಿ? ಇದರಿಂದ ಬಿಜೆಪಿಯ ಮೂಲ ಆಶಯಕ್ಕೆ ಧಕ್ಕೆಯುಂಟಾಗಿದೆ ಎಂದೆಲ್ಲಾ ಆರೋಪಿಸಲಾಗಿದೆ. ಅಲ್ಲದೆ ಪದವೀಧರರಿಗೆ ಮತಕ್ಕಾಗಿ ಹಣ ಕೂಡಾ ನೀಡಲಾಗಿದೆ ಎಂಬ ಆರೋಪ ರಘುಪತಿ ಭಟ್ ಬೆಂಬಲಿಗರಿಂದ ವ್ಯಕ್ತವಾಗಿದೆ.