ಶಿವಮೊಗ್ಗ: ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ಮತ್ತು ಕುಟುಂಬದವರ ವಿರುದ್ದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಅರಸಾಳು ಗ್ರಾಮದ ಕಿರಣ್ ಡಿಸೋಜಾ, ಅತ್ತೆ ಸೂರಿನ್ ಡಿಸೋಜಾ, ನಾದಿನಿ ನಿರ್ಮಲಾ ಮತ್ತು ಅಪ್ರಾಪ್ತ ಬಾಲಕಿಯೊಬ್ಬಳು ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಸುನೀತಾ ಡಿಸೋಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಕಾರಣಕ್ಕೆ ಪತಿಯ ಮನೆಯವರು ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೆ ಮಗುವಿನ ಕಾಲು ಹಿಡಿದು ನೆಲಕ್ಕೆ ಬಡಿದು ಸಾಯಿಸುವ ಪ್ರಯತ್ನವನ್ನು ಸಹ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸುನೀತಾ ಅವರು ಶನಿವಾರ ಅರಸಾಳು ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಪತಿ ಮತ್ತು ಅತ್ತೆ ನಡುರಸ್ತೆಯಲ್ಲೇ ಮಾರಣಾಂತಿಕವಾಗಿ ಥಳಿಸಿದ್ದು, ರಿಪ್ಪನ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.