ಮಂಗಳೂರು,ಎ.23: ಕೇಂದ್ರದ ಬಿಜೆಪಿ ಸರಕಾರವು ಅಮೂಲ್ಯ ಕಡತಗಳನ್ನು ನಾಪತ್ತೆ ಮಾಡುವುದರಲ್ಲಿ ಹಾಗೂ ಸರಕಾರದ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಯವರಿಗೆ ವಹಿಸುದರಲ್ಲಿ ನಿಷ್ಣಾತರು ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಖಾಸಗೀ ಮಾರಾಟದಿಂದ ಕೇಂದ್ರದ ನೌಕರರು ಭದ್ರತೆ ಕಳೆದುಕೊಳ್ಳುತ್ತಿದ್ದಾರೆ. ಕಾರ್ಮಿಕ ವಿರೋಧಿ ನೀತಿಯಿಂದ ಉದ್ಯೋಗವಕಾಶ ತೀವ್ರವಾಗಿ ಇಳಿಮುಖವಾಗುತ್ತಿದೆ. ಯುವಜನತೆ ವಿದೇಶ ಪಲಾಯನ ಮಾಡುತ್ತಿದ್ದಾರೆ.
ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ವಿಚಾರ ಬಂದಾಗ ಇದೇ ಬಿಜೆಪಿ ನೀಡದಂತೆ ಭಾರೀ ಪ್ರತಿಭಟನೆ ನಡೆಸಿತ್ತು. ಇಂತಹ ಸರಕಾರದ ಅಗತ್ಯವಿದೆಯೇ ಎಂಬುದನ್ನು ಯುವಶಕ್ತಿ ಮನಗಾಣಬೇಕು. ಕಪ್ಪು ಹಣ ತರುವ ವಿಚಾರದಲ್ಲಿ ಸಂಪೂರ್ಣ ವೈಫಲ್ಯಕ್ಕೀಡಾಗಿರುವ ಬಿಜೆಪಿ ನೋಟ್ ಬ್ಯಾನ್ ಹೆಸರಿನಲ್ಲಿ ಕರಾಳ ದಿನಗಳನ್ನು ಜನತೆ ಅನುಭವಿಸುವಂತಾಯಿತು. ಹಲವರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉಂಟು ಮಾಡಿದರು.ಜನತೆ ಇದೆಲ್ಲವನ್ನೂ ಮರೆಯದೆ ದೇಶದ ಭವಿಷ್ಯದ ದೃಷ್ಠಿಯಿಂದ ಕಾಂಗ್ರೆಸ್ ಸೂಕ್ತ ಎಂದು ಮನಗಂಡಿದ್ದಾರೆ. ಕಾಂಗ್ರೆಸ್ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.