ಬಂಟ್ವಾಳ: ಫರಂಗಿಪೇಟೆಯ ದಿಗಂತ್ ನಾಪತ್ತೆಯಾಗಿ ಹಲವು ದಿನಗಳೇ ಕಳೆದಿದ್ದು, ಆತನ ಪತ್ತೆಗೆ ಪೊಲೀಸ್ ಇಲಾಖೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಫರಂಗಿಪೇಟೆಯ ರೈಲ್ವೆ ಹಳಿಯಲ್ಲಿ ಕಳೆದ ಫೆ. 25 ರಂದು ದಿಗಂತ್‌ನದ್ದು ಎನ್ನಲಾದ ರಕ್ತದ ಕಲೆಗಳುಳ್ಳ ಚಪ್ಪಲಿ ಮತ್ತು ಮೊಬೈಲ್ ಫೋನ್ ಪತ್ತೆಯಾಗಿತ್ತು. ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ತಂಡ ಇಂದು ಮುಂಜಾನೆಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಕಳೆದ ಹಲವು ದಿನಗಳಿಂದ ದಿಗಂತ್‌ನನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಅವಿರತ ಶ್ರಮಿಸುತ್ತಿದೆ. ಹೀಗಿದ್ದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 100 ಕ್ಕೂ ಅಧಿಕ ಪೊಲೀಸರ ತಂಡ ಇಂದು ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಆರಂಭ ಮಾಡಿದೆ. ಹಾಗೆಯೇ ನೇತ್ರಾವತಿ ನದಿಯಲ್ಲಿಯೂ ದೋಣಿಯ ಮೂಲಕ ಕಾರ್ಯಾಚರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಡ್ರೋಣ್, ಡಾಗ್ ಸ್ಕ್ವಾಡ್ ಮೂಲಕವೂ ದಿಗಂತ್ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿಎಆರ್ ತಂಡ, ಎಫ್‌ಎಸ್‌ಎಲ್, ರೈಲ್ವೆ ಪೊಲೀಸ್ ತಂಡ, ಅಗ್ನಿಶಾಮಕ ದಳವೂ ಈ ಪ್ರಕರಣ ಬೇಧಿಸುವ ನಿಟ್ಟಿನಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ಕೈ ಜೋಡಿಸಿದೆ.
ಇನ್ನು ಸಾರ್ವಜನಿಕ ವಲಯದಲ್ಲಿ ದಿಗಂತ್‌ನನ್ನು ಮಂಗಳಮುಖಿಯರು ಅಪಹರಣ ಮಾಡಿದರೇ? ಎನ್ನುವ ಶಂಕೆಯೂ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ಬಿ.ಸಿ. ರೋಡ್‌ನಲ್ಲಿ ಮಂಗಳಮುಖಿಯರು ವ್ಯಕ್ತಿಯೊಬ್ಬನನ್ನು ಅಪಹರಿಸಿ ಲಿಂಗ ಪರಿವರ್ತನೆ ಮಾಡಿದ ಪ್ರಕರಣ ನಡೆದಿತ್ತು. ಈ ರೀತಿಯಲ್ಲೇ ದಿಗಂತ್ ಅಪಹರಣವೂ ನಡೆದಿದೆಯೇ? ದಿಗಂತ್ ನಾಪತ್ತೆ ಹಿಂದೆ ಸ್ಥಳೀಯನೊಬ್ಬನ ಕೈವಾಡ ಇದೆಯೇ? ಎನ್ನುವ ಹಲವಾರು ಪ್ರಶ್ನೆಗಳು, ಸಂಶಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ದಿಗಂತ್ ಸುಳಿವು ಸಿಕ್ಕ ಬಳಿಕವಷ್ಟೇ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯಲಿದ್ದು, ದಿಗಂತ್ ಪತ್ತೆಗಾಗಿ ಪೊಲೀಸರು ಎಲ್ಲಾ ರೀತಿಯಲ್ಲಿಯೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.