ಕಿತ್ತೂರು: ಮದುವೆಯ ವಿಷಯವಾಗಿ ಮದ್ಯಪಾನ ಮಾಡಿ ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದ ಮಗನ ಕಾಟಕ್ಕೆ ಬೇಸತ್ತು ತಂದೆ ಮತ್ತು ಅಣ್ಣ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕನಂದೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಮಂಜುನಾಥ ನಾಗಪ್ಪ ಉಳ್ಳಾಗಡ್ಡಿ(25) ಎಂದು ಗುರುತಿಸಲಾಗಿದೆ.
ಮಂಜುನಾಥ ಓರ್ವ ಯುವತಿಯವ್ನು ಪ್ರೀತಿ ಮಾಡುತ್ತಿದ್ದು, ಇದು ಆತನ ಮನೆಯವರಿಗೆ ಇಷ್ಟವಿರಲಿಲ್ಲ. ಆದರೂ ಆರೋಪ ಸ್ಥಾನದಲ್ಲಿರುವ ತಂದೆ ನಾಗಪ್ಪ, ಹಿರಿಯ ಮಗ ಗುರುಬಸಪ್ಪನ ನಿಶ್ಚಿತಾರ್ಥದ ಜೊತೆಗೆ ಮಂಜುನಾಥ್ ನಿಶ್ಚಿತಾರ್ಥವನ್ನೂ ಮಾಡಿ ಮುಗಿಸಿದ್ದರು. ಆದರೆ ಮದುವೆ ಹಿರಿಯ ಮಗನಿಗೆ ಮಾತ್ರ ಮಾಡಿದ್ದು, ಮಂಜುನಾಥ್ ಮದುವೆ ಮಾಡಿರಲಿಲ್ಲ.
ಆ ಬಳಿಕ ಪ್ರತಿನಿತ್ಯ ಮದ್ಯಪಾನ ಮಾಡಿ ಬಂದು ಹೆತ್ತವರ ಜೊತೆಗೆ ತನ್ನ ಮದುವೆಯ ಕುರಿತಾಗಿ ಮಂಜುನಾಥ ಜಗಳವಾಡುತ್ತಿದ್ದ. ಈತನ ಗೋಳಿನಿಂದ ಬೇಸತ್ತ ತಂದೆ ಮತ್ತು ಅಣ್ಣ ಆತನನ್ನು ಮನೆಯ ಹೊರಗಡೆ ತಂದು ನೆಲಕ್ಕೆ ಕೆಡವಿ ಕಲ್ಲು, ಇಟ್ಟಿಗೆಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಪ್ರಕರಣ ಚೆನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.