ಬೆಂಗಳೂರು: ಗೋವಾ ಪೊಲೀಸರು ನಡೆಸಿದ ಮಾದಕದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಬಂಧಿಸಿದ್ದು, ಈತನಿಂದ ಸುಮಾರು 11 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಸುಮಾರು 11.6 ಕೋಟಿ ರೂ. ಮೌಲ್ಯದ ಡ್ರಗ್ಸ್ ಪೊಲೀಸರ ವಶವಾಗಿದ್ದು, ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಕ ದ್ರವ್ಯ ಜಪ್ತಿ ಮಾಡಿದ ಘಟನೆ ಇತಿಹಾಸದಲ್ಲಿ ಇದೇ ಮೊದಲು ಎಂದು ಗೋವಾ ಪೊಲೀಸರು ಹೇಳಿದ್ದಾರೆ.
ನೇಪಾಳದಿಂದ ಭಾರತಕ್ಕೆ ಈ ಆರೋಪಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಕಳೆದೊಂದು ತಿಂಗಳಿನಿಂದ ಈತನ ಮೇಲೆ ಗುಪ್ತಚರ ಇಲಾಖೆ ದೃಷ್ಟಿ ನೆಟ್ಟಿದ್ದು, ಈಗ ಖಚಿತ ಮಾಹಿತಿಯ ಮೇಲೆ ಈತನನ್ನು ಬಂಧಿಸಲಾಗಿದೆ. ಬಂಧಿತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.