ಬೆಂಗಳೂರು: ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮದುವೆಯಾದ ಪತಿ ತನ್ನ ಪತ್ನಿಯ ದೇಹಾಕಾರದ ಬಗ್ಗೆ ಮಾತನಾಡಿ, ವರದಕ್ಷಿಣೆಗೆ ಪೀಡಿಸಿ ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತಿ ಸಾಯಿಕುಮಾರ್ ಮತ್ತು ಪತ್ನಿ ರಮ್ಯಾ ನಡುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ರಮ್ಯಾ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರೆ, ಸಾಯಿ ಕುಮಾರ್ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಗುವನ್ನು ಹೊಂದಿರುವ ಈ ಜೋಡಿ ಸದ್ಯ ಸುದ್ದಿಯಾಗಿದ್ದು ಗಂಡನ ವರದಕ್ಷಿಣೆಯ ದಾಹಕ್ಕೆ.
ಮದುವೆಯ ಬಳಿಕ ನೀನು ದಪ್ಪಗಿದ್ದೀಯ, ಮುದಿಕಿಯ ಹಾಗೆ ಕಾಣುತ್ತೀಯ ಎಂದು ಪತ್ನಿಯ ದೇಹದ ಬಗ್ಗೆ ಮಾತನಾಡಿ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ. ಜೊತೆಗೆ ಪತ್ನಿಯ ಜೊತೆಗೆ ಮಗುವಿಗೆ ಮತ್ತು ಮಾವನಿಗೂ ಖಾರದ ಪುಡಿ ಎರಚಿ ಹಿಂಸೆ ನೀಡಿದ್ದಾನೆ. ಹತ್ತು ಲಕ್ಷ ವರದಕ್ಷಿಣೆ, ಚಿನ್ನ ತಂದುಕೊಡದೆ ಹೋದರೆ ಸಾಯುಸುವ ಬೆದರಿಕೆಯನ್ನೂ ಹಾಕಿದ್ದಾನೆ. ಹಾಗೆಯೇ ಮಾವನಿಗೆ ಚಾಕುವಿನಿಂದ ಚುಚ್ಚುವುದಕ್ಕೂ ಈತ ಸ್ಕೆಚ್ ಹಾಕಿದ್ದ. ಈ ಹಿಂದೆಯೂ ಆತ ತನ್ನ ತಂಗಿಯ ಮದುವೆಗೆ ವರದಕ್ಷಿಣೆ ನೀಡಲು ತನ್ನ ತಂದೆಯಿಂದ 5 ಲಕ್ಷ ವಸೂಲಿ ಮಾಡಿದ್ದ ಎಂದು ರಮ್ಯಾ ಹೇಳಿದ್ದಾರೆ.
ಆತನ ವಿರುದ್ಧ ರಮ್ಯಾ ಅವರು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆತನ ಜೊತೆಗೆ ತಾನಿನ್ನು ಬಾಳುವುದಿಲ್ಲ ಎಂದು ನಿರ್ಧಾರ ಮಾಡಿದ್ದಾಗಿಯೂ ಹೇಳಿದ್ದಾರೆ.