ಮಂಗಳೂರು: ನಮ್ಮ ಯುವಕರಿಗೆ ನಮ್ಮ ಧರ್ಮದಲ್ಲಿ ಮದುವೆಯಾಗಲು ಯುವತಿಯರು ಸಿಗದೇ ಹೋದಲ್ಲಿ, ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದ್ದಾರೆ.
ಅವರು ಕದ್ರಿ ಮಂಜುನಾಥನ ಸನ್ನಿಧಿಯಿಂದ ಕುತ್ತಾರು ಕೊರಗಜ್ಜ ಕ್ಷೇತ್ರದ ವರೆಗೆ ನಡೆದ ಪಾದಯಾತ್ರೆ ಕಾರ್ಯಕ್ರಮದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಲವ್ ಜಿಹಾದ್‌ನಂತಹ ವಿಷಯದಲ್ಲಿ ಪ್ರತಿಭಟನೆ ಮಾಡುತ್ತಾ ಕೂರುವುದಲ್ಲ. ಕಾಲ ಬದಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂ ಯುವ ಸಮುದಾಯ ಮತಾಂತರವಾದವರನ್ನು ಮರಳಿ ಮಾತೃ ಧರ್ಮಕ್ಕೆ ಕರೆದು ತರುವ ಕೆಲಸ ಮಾಡಬೇಕು. ಹಿಂದೂ ಯುವಕರಿಗೆ 35 ವರ್ಷ ಕಳೆದರೂ ವಧು ಸಿಗುತ್ತಿಲ್ಲ. ಹಾಗಾಗಿ ಅವರು ಬೇರೆ ಧರ್ಮದ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ಸವಾಲನ್ನು ಸ್ವೀಕರಿಸಲಿ ಎಂದಿದ್ದಾರೆ.
ಹಿಂದೂ ಯುವತಿಯರನ್ನು ಲವ್ ಜಿಹಾದ್ ಮೂಲಕ ಮದುವೆಯಾಗುವ ನಾಟಕ ಅವರಿಂದ ನಡೆಯುತ್ತಿದೆ. ಆದರೆ ನಾವು ಮಾತ್ರ ಬೇರೆ ಧರ್ಮದ ಯುವತಿಯರನ್ನು ನಿಜವಾಗಿ ಮದುವೆಯಾಗುವ ಸಂಕಲ್ಪ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ನಮ್ಮ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದವರನ್ನು ಘರ್ ವಾಪಸಿ ಮಾಡಲು ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ನೀಡಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಹಿಂದೂ ಸಂತರು ಬೆಂಬಲ ಸೂಚಿಸಬೇಕು. ಅದರ ಬಗ್ಗೆ ಹೇಳಿಕೆಗಳನ್ನು ನೀಡಬೇಕು. ಘರ್ ವಾಪಸಿ ವಿಷಯವನ್ನು ಸಂಘಟನೆಗಳು ಮಾಡುತ್ತವೆ ಎಂದು ಕೈಕಟ್ಟಿ ಕೂರುವುದಲ್ಲ. ಈ ಕಾರ್ಯವನ್ನು ಪ್ರತಿಯೊಬ್ಬರು ಮಾಡುವತ್ತ ಮನಸ್ಸು ಮಾಡಬೇಕು ಎಂದು ಅವರು ನುಡಿದಿದ್ದಾರೆ.