ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 1,11,330 ಅನುಮೋದಿತ ಹುದ್ದೆಗಳಿದ್ದು, ಅದರಲ್ಲಿ ಶೇ. 16.69 ರಷ್ಟು ಸಿಬ್ಬಂದಿ ಕೊರತೆ ಇದೆ. 18,581 ಹುದ್ದೆಗಳು ಖಾಲಿ ಇವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗೆ ಅವರು ಈ ವಿವರಣೆ ನೀಡಿದ್ದಾರೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆಯೂ ಮಾಹಿತಿ ನೀಡಿರುವ ಅವರು, 600 ಸಬ್-ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 4,115 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅದಕ್ಕೆ ನೇಮಕಾತಿ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ ಎಂದು ಹೇಳಿದರು.
819 ಹೆಡ್ ಕಾನ್ಸ್ಟೆಬಲ್, 6,591 ಕಾನ್ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ನಗರ ಸಶಸ್ತ್ರ ಮೀಸಲು/ಜಿಲ್ಲಾ ಸಶಸ್ತ್ರ ಮೀಸಲು) ಮತ್ತು 3,830 ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಹುದ್ದೆಗಳು ಭರ್ತಿಯಾಗಿಲ್ಲ.