ಮಂಗಳೂರು: ಪತ್ನಿಯ ಮೇಲೆ ಹಲ್ಲೆ ಮಾಡಿ, ಬಳಿಕ ಆಕೆಗೆ ವಿಷ ಕುಡಿಸಿ ಕೊಲೆಗೈದ ಪತಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೋಮೇಶ್ವರದ ಕುಂಪಲ ಚೇತನ ನಗರ ನಿವಾಸಿ ಜೋಸೆಫ್ ಫ್ರಾನ್ಸಿಸ್ ರೆನ್ಸನ್(53) ಶಿಕ್ಷೆಗೆ ಒಳಪಟ್ಟ ಆರೋಪಿ.
ರೆನ್ಸಸ್ ತನ್ನ ಪತ್ನಿ ಶೈಮಾಳನ್ನು 2022 ರ ಮೇ 11 ರಂದು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆಗೈದು, ವಿಷವುಣಿಸಿ ಹತ್ಯೆ ಮಾಡಿದ್ದ. ದುಶ್ಚಟಗಳ ದಾಸನಾಗಿದ್ದ ರೆನ್ಸನ್‌ಗೆ ಪತ್ನಿ ಶೈಮಾ ಬುದ್ಧಿ ಹೇಳಿದ್ದರಿಂದ ಕೋಪಗೊಂಡು ಆತ ಆಕೆಯನ್ನು ಹತ್ಯೆ ಮಾಡಿದ್ದ. ಈ ಸಂದರ್ಭದಲ್ಲಿ ಅವರ ಪುತ್ರರಿಬ್ಬರೂ ಮನೆಯಲ್ಲೇ ಇದ್ದು, ಅವರ ಕಣ್ಣೆದುರಲ್ಲೇ ರೆನ್ಸನ್ ಈ ದುಷ್ಕೃತ್ಯ ಎಸಗಿದ್ದ.
ಶೈಮಾ ಮೇಲೆ ಪೈಶಾಚಿಕ ಕೃತ್ಯ ಎಸಗಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯೇ ವಿಷ ಸೇವಿಸಿ ಸಾಯಲು ಪ್ರಯತ್ನ ನಡೆಸಿದ್ದು ಎಂದು ನಂಬಿಸಲು ಹೊರಟಿದ್ದ. ಶೈಮಾ ಅವರನ್ನು ಆಕೆಯ ಪುತ್ರರು ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಚಿದ್ದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನು ಕಣ್ಣಾರೆ ಕಂಡಿದ್ದ ಪುತ್ರರು ಮಾತ್ರ ಸಾಕ್ಷಿ ಹೇಳಿಲ್ಲ. ಆದರೆ ವೈದ್ಯರು ನೀಡಿದ ಮರಣೋತ್ತರ ಪರೀಕ್ಷಾ ವರದಿ ಆರೋಪಿಗೆ ಶಿಕ್ಷೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತು.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಶೈಮಾ ತಲೆಗೆ ಗಂಭೀರವಾಗಿ ಗಾಯಗಳಾದ ಪರಿಣಾಮ ಮೃತಪಟ್ಟಿದ್ದಾಗಿ ಹೇಳಿದ್ದು, ಇದರನ್ವಯ ಕೇಸು ದಾಖಲಾಗಿತ್ತು. ಶೈಮಾ ಮಕ್ಕಳು ತಾಯಿಯೇ ಕೋಣೆಯ ಒಳ ಹೋಗಿ ತಿಲಕ ಹಾಕಿ ವಿಷ ಕುಡಿದಿದ್ದಾರೆ ಎಂದು ಸಾಕ್ಷಿ ಹೇಳಿದ್ದರು.