ತುಮಕೂರು: ಸಿರಿವಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ವ್ಯವಸ್ಥಿತ ಸಂಚು ಹೂಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕೆಲವು ಯುವಕರು ಮತ್ತು ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಶಾ ಎಂಬಾಕೆ ಸಾಮಾಜಿಕ ಜಾಲತಾಣಗಳ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸ್ನೇಹಿತೊಯಾಗಿದ್ದು, ಬಳಿಕ ಆಕೆ ಅವರಿಗೆ ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದು ಮದುವೆ ಆಗೋಣ ಎಂದು ದಂಬಾಲು ಬೀಳುತ್ತಾಳೆ. ಆತ ಅದಕ್ಕೆ ಒಪ್ಪದೇ ಹೋದಾಗ ಅವರನ್ನು ಜಮೀನಿಗೆ ಸಂಬಂಧಿಸಿದಂತೆ ಮಾತುಕತೆಗೆಂದು ಉಪಾಯದಿಂದ ಕರೆಸಿ, ಹೊಟೇಲ್ ಒಂದಕ್ಕೆ ಕರೆದೊಯ್ಯಲಾಗುತ್ತದೆ. ಈ ಸಂದರ್ಭದಲ್ಲಿ ಮೊದಲೇ ಯೋಜನೆ ರೂಪಿಸಿದ್ದಂತೆ ಬಸವರಾಜ್, ಭರತ್ ಎಂಬ ಯುವಕರು ಅಲ್ಲಿಗೆ ಬಂದು ಉದ್ಯಮಿಯನ್ನು ಥಳಿಸಿ, ಅರೆ ಬೆತ್ತಲೆ ಮಾಡಿ ಫೋಟೋ ತೆಗೆದುಕೊಂಡು ಇಪ್ಪತ್ತು ಲಕ್ಷ ರೂ. ನೀಡುವಂತೆ ಬೇಡಿಕೆ ಇಡುತ್ತಾರೆ. ಇದಕ್ಕವರು ಒಪ್ಪದಾಗ ಸೆರೆಹಿಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವ ಬೆದರಿಕೆ ಹಾಕುತ್ತಾರೆ.
ಈ ಸಂಬಂಧ ಉದ್ಯಮಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿಯರಾದ ನಿಶಾ, ಜ್ಯೋತಿಯನ್ನು ವಶಕ್ಕೆ ಪಡೆದಿದ್ದಾರೆ. ಭರತ್ ಮತ್ತು ಬಸವರಾಜು ಮೂರು ವರ್ಷಗಳ ಹಿಂದೆ ನಡೆದ ಕೊಲೆ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಿದ್ದವರು, ಈ ಪ್ರಕರಣದ ರೂವಾರಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.