ಮಂಗಳೂರು: ಯಾರದ್ದೋ ಮೇಲಿನ ದ್ವೇಷಕ್ಕೆ ಇನ್ಯಾರೋ ಅಪಾಯಕ್ಕೆ ಸಿಲುಕಿದ ಘಟನೆ ಮಂಗಳೂರಿನ ಬಿಜೈ ಕಾಪಿಕಾಡಿನಲ್ಲಿ ನಡೆದಿದೆ.
ನೆರೆಮನೆಯಾತನ ಮೇಲೆ ದ್ವೇಷ ಹೊಂದಿದ್ದ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಸತೀಶ್ ಎಂಬವರು ಆತನ ಮೇಲೆ ಕಾರು ಹತ್ತಿಸಲು ಹೋಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದು, ಆ ಮಹಿಳೆ ಪಕ್ಕದ ಕಾಂಪೌಡಿನಲ್ಲಿ ನೇತಾಡಿದ ಘಟನೆ ನಡೆದಿದೆ.
ಸತೀಶ್ ತಮ್ಮ ನೆರೆಮನೆಯ ಮುರಳಿ ಪ್ರಸಾದ್ ಎಂಬವರ ಜೊತೆಗೆ ಯಾವುದೋ ಕಾರಣಕ್ಕೆ ದ್ವೇಷ ಕಟ್ಟಿಕೊಂಡಿದ್ದರು. ಈ ಇಬ್ಬರೂ ಎದುರು ಸಿಕ್ಕಾಗೆಲ್ಲಾ ಪರಸ್ಪರ ಬೈದಾಡಿಕೊಂಡೇ ಹೋಗುತ್ತಿದ್ದರು. ಅದರಂತೆ ಬಿಜೈ ಕಾಪಿಕಾಡಿನಲ್ಲಿ ಮುರಳಿ ಅವರು ಬೈಕಿನಲ್ಲಿ ಹೋಗುವುದನ್ನು ಕಂಡ ಸತೀಶ್, ಅವರ ಮೇಲೆ ತಮ್ಮ ಕಾರನ್ನು ಹತ್ತಿಸಲು ನೋಡಿದ್ದಾರೆ. ಆದರೆ ಅತಿವೇಗದಲ್ಲಿದ್ದ ಕಾರು ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆ ಮಹಿಳೆ ಎದುರಿಗಿದ್ದ ಕಾಂಪೌಡ್‌ಗೆ ಎಸೆಯಲ್ಪಟ್ಟು, ಅಲ್ಲೇ ನೇತಾಡಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಬೈಕ್ ಸವಾರ ಮುರಳಿ ಅವರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾಂಪೌಡ್‌ನಲ್ಲಿ ನೇತಾಡುತ್ತಿದ್ದ ಮಹಿಳೆಯನ್ನು ಕೆಳಗಿಳಿಸಿದ ಸ್ಥಳೀಯರು ಆಕೆಯನ್ನು ಉಪಚರಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಆರೋಪಿ ಸತೀಶ್ ವಿರುದ್ಧ ಉರ್ವ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿ, ಬಂಧಿಸಿದ್ದಾರೆ.