ಹಾವೇರಿ: ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿಯ ಹತ್ಯೆ ಮಾಡಿದ್ದ ಆಕೆಯ ಸ್ನೇಹಿತ ನಯಾಜ್, ವಿನಯ್ ಮತ್ತು ದುರ್ಗಾಚಾರಿ ಪೊಲೀಸರ ಅತಿಥಿಗಳಾಗಿದ್ದಾರೆ.
ರಣೆಬೆನ್ನೂರಿನ ಫತ್ತೇಪುರದ ಬಳಿ ಮಾ.6 ರಂದು ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಅಪರಿಚಿತ ಶವ ಎನ್ನುವ ನಿಟ್ಟಿನಲ್ಲಿ ಶವಸಂಸ್ಕಾರ ಸಹ ನಡೆಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯುವತಿಯನ್ನು ಕೊಲೆ ಮಾಡಿ ನದಿಗೆಸೆಯಲಾಗಿದೆ ಎನ್ನುವ ವಿಚಾರ ತಿಳಿದು ಬಂದಿತ್ತು.
ಈ ಸಂಬಂಧ ತನಿಖೆ ಆರಂಭ ಮಾಡಿದ ಪೊಲೀಸರಿಗೆ ಶವ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿಯದ್ದು ಎಂದು ಗೊತ್ತಾಗಿತ್ತು. ಈ ಪ್ರಕರಣದಲ್ಲಿ ನಯಾಜ್, ವಿನಯ್ ಮತ್ತು ದುರ್ಗಾಚಾರಿ ಎನ್ನುವವರೇ ಹಂತಕರು ಎನ್ನುವ ವಿಷಯವೂ ಗೊತ್ತಾಗಿತ್ತು.
ವಿರಾಪುರ ಗ್ರಾಮದ ನಯಾಜ್, ವಿನಯ್ ಮತ್ತು ದುರ್ಗಾಚಾರಿ ಹೋರಿ ಬೆದರಿಸುವ ಸ್ಪರ್ಧೆಯ ಅಭಿಮಾನಿಗಳಾಗಿದ್ದು, ಸ್ವಾತಿ ಸಹ ಈ ಸ್ಪರ್ಧೆಯ ಅಭಿಮಾನಿಯಾಗಿದ್ದಳು. ಆ ಸ್ಪರ್ಧೆ ಎಲ್ಲೇ ನಡೆದರೂ ಸ್ವಾತಿ ಅಲ್ಲಿಗೆ ಹೋಗುತ್ತಿದ್ದಳು. ಈ ಸಮಯದಲ್ಲಿ ಮೂವರು ಆರೋಪಿಗಳ ಜೊತೆಗೆ ಸ್ವಾತಿ ಗೆಳೆತನ ಮಾಡಿದ್ದಳು. ದಿನಗಳೆದಂತೆ ನಯಾಜ್ ಜೊತೆಗಿನ ಸ್ನೇಹ ಪ್ರೇಮಕ್ಕೆ ತಿರುಗಿತ್ತು.
ಆ ಬಳಿಕ ಸ್ವಾತಿಗೆ ಮೋಸ ಮಾಡಿ ನಯಾಜ್ ತನ್ನದೇ ಧರ್ಮದ ಯುವತಿಯ ಜೊತೆಗೆ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಸುದ್ದಿ ತಿಳಿದ ಸ್ವಾತಿ ತನಗೆ ಮೋಸ ಮಾಡಬೇಡ ಎಂದು ನಯಾಜ್ ಜೊತೆ ಜಗಳವಾಡಿದ್ದಳು. ಇದರಿಂದ ನಯಾಜ್ ತನ್ನ ಇಬ್ಬರು ಸ್ನೇಹಿತರಾದ ವಿನಯ್, ದುರ್ಗಾಚಾರಿ ಜೊತೆಗೂಡಿ ಆಕೆಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ. ಅದರಂತೆ ಮಾ. 3 ರಂದು ಸ್ವಾತಿಯನ್ನು ಬರ ಹೇಳಿ ಬಾಡಿಗೆ ಕಾರ್ ಮಾಡಿಕೊಂಡು ಆಕೆಯನ್ನು ಕರೆದುಕೊಂಡು ಹೋಗಿದ್ದರು. ಆ ಬಳಿಕ ಆಕೆಯ ಕೊರಳಿಗೆ ಟವಲ್ ಸುತ್ತಿ ಕೊಲೆಗೈದು ಬಳಿಕ ತುಂಗಭದ್ರಾ ನದಿಗೆ ಶವವನ್ನು ಎಸೆದಿದ್ದರು ಎಂದು ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ.