ಶಿವಮೊಗ್ಗ: ಹಾಸನದ ವ್ಯಕ್ತಿಯೋರ್ವರಿಗೆ ನಕಲಿ ಚಿನ್ನದ ನಾಣ್ಯ ನೀಡಿ 7 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಭದ್ರಾವತಿಯ ಮಂಗೋಟೆಯಲ್ಲಿ ನಡೆದಿದೆ.
ಗಿರಿಗೌಡ ಎನ್ನುವವರೇ ಹಣ ಕಳೆದುಕೊಂಡವರು. ಸುರೇಶ್ ಎನ್ನುವ ವ್ಯಕ್ತಿ ಗಿರಿ ಗೌಡ ಅವರಿಗೆ ಕರೆ ಮಾಡಿ ತಾನು ಮಾದೇಶ್ವರ ಬೆಟ್ಟದ ನಿವಾಸಿ ಎಂದು ಪರಿಚಯಿಸಿಕೊಂಡಿದ್ದು, ತನ್ನೂರಿನ ವ್ಯಕ್ತಿಯೊಬ್ಬರಿಗೆ ಜಮೀನಿನಲ್ಲಿ ಚಿನ್ನದ ನಾಣ್ಯಗಳು ದೊರೆತಿದ್ದು, ಅವರು ಬಡವರಾಗಿದ್ದು, ಮೂಲ ಮದುವೆಗೆ ಹಣ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದು, ಬೇಕಾದಲ್ಲಿ ಕಡಿಮೆ ಬೆಲೆಗೆ ತೆಗೆಸಿಕೊಡುವುದಾಗಿ ಹೇಳಿದ್ದಾನೆ.
ಈ ವೇಳೆ ಅದನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಹೇಳಿ ಕರೆ ಕಟ್ ಮಾಡಿದ್ದಾರೆ. ಆದರೆ ಮತ್ತೆ ಕಾಲ್ ಮಾಡಿದ ಸುರೇಶ ನಾಣ್ಯಗಳನ್ನು ಒಮ್ಮೆ ಪರಿಶೀಲನೆ ಮಾಡಿ ಎಂದು ಹೇಳಿದ್ದಾನೆ. ಅದರಂತೆ ಗಿರಿಗೌಡರು ನಾಣ್ಯ ಪರಿಶೀಲನೆಗೆ ಒಪ್ಪಿಕೊಂಡಿದ್ದಾರೆ.
ಅದಾದ ಬಳಿಕ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ಇದನ್ನು ಎಲ್ಲಿ ಬೇಕಾದರೂ ಪರೀಕ್ಷೆ ಮಾಡಿಕೊಳ್ಳಿ. ಆಮೇಲೆ ವ್ಯವಹಾರ ಮುಂದುವರಿಸೋಣ ಎಂದು ಸುರೇಶ್ ಹೇಳಿದ್ದಾನೆ. ಅದನ್ನು ಊರಿನಲ್ಲಿ ಪರೀಕ್ಷೆ ನಡೆಸಿದ ಗಿರಿ ಗೌಡ ಅದು ಅಸಲಿ ಎಂದು ತಿಳಿದು 7 ಲಕ್ಷಕ್ಕೆ ಒಂದು ಕೆ.ಜಿ. ಚಿನ್ನದ ನಾಣ್ಯ ಎಂದು ಮಾತುಕತೆ ಮಾಡಿಕೊಂಡು ವ್ಯವಹಾರ ನಡೆಸಿದ್ದರು. ಆ ಬಳಿಕ ಮುಂಗೋಟಿ ಸೇತುವೆ ಬಳಿ ಬಂದು ನಾಣ್ಯಗಳನ್ನು ಪಡೆದುಕೊಳ್ಳುವಂತೆ ಸುರೇಶ್ ಹೇಳಿದ್ದ.
ಅದರಂತೆ 7 ಲಕ್ಷ ನೀಡಿ ನಾಣ್ಯ ಸಂಗ್ರಹಿಸಿಕೊಂಡಿದ್ದು, ಊರಿಗೆ ಬಂದು ಪರೀಕ್ಷೆ ನಡೆಸಿದಾಗ ಈ ನಾಣ್ಯಗಳು ನಕಲಿ ಎಂದು ತಿಳಿದಿದೆ.
ಈ ಸಂಬಂಧ ಬಾಳೇಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.