ಬೆಂಗಳೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕೋಚಿಂಗ್ ಸೆಂಟರ್ ತೆರೆದು, SSLC, PUC ನಕಲಿ ಮಾರ್ಕ್ಸ್‌ಕಾರ್ಡ್‌ಗಳನ್ನು ಹಣ ಪಡೆದು ವಿತರಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿದ್ದುಕೊಂಡೇ ಈ ದಂಧೆ ನಡೆಸುತ್ತಿದ್ದರು. ಹಾಗೆಯೇ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯನ್ನು ಸಹ ಇವರು ಹುಟ್ಟು ಹಾಕಿದ್ದರು.
ದೂರ ಶಿಕ್ಷಣ ವ್ಯವಸ್ಥೆಯಡಿ ಶಿಕ್ಷಣ ಪಡೆಯಲು ಬಯಸುವವರನ್ನು ತಮ್ಮ ಕೋಚಿಂಗ್ ಸೆಂಟರ್‌ಗೆ ಸೇರಿಸಿಕೊಳ್ಳುತ್ತಿದ್ದರು. ಹಾಗೆಯೇ ಇವರ ಸ್ಟಡಿ ಸೆಂಟರಿನಲ್ಲಿ ಕಲಿಯುತ್ತಿದ್ದವರಿಗೆ ತಾವೇ ಹುಟ್ಟುಹಾಕಿದ್ದ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ವಿತರಣೆ ಮಾಡುತ್ತಿದ್ದರು.
ಆರೋಪಿಗಳು ನಕಲಿ ಅಂಕಪತ್ರವನ್ನು ಧಾರವಾಡ ಮತ್ತು ಬೆಂಗಳೂರುಗಳಲ್ಲಿ ಮುದ್ರಿಸುತ್ತಿದ್ದರು. ಪರೀಕ್ಷೆ ಬರೆಯದವರಿಗೂ ಇವರು ನಕಲಿ ಅಂಕಪಟ್ಟಿ ವಿತರಣೆ ಮಾಡುತ್ತಿದ್ದರು. ಸುಮಾರು 350 ಜನರಿಗೆ ಇವರು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸಗೊಳಿಸಿದ್ದಾಗಿ ತಿಳಿದು ಬಂದಿದೆ.