ಸುಳ್ಯ: ತಾಯಿ ಮತ್ತು ಮಗ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಮಗ ಸಾವನ್ನಪ್ಪಿ ತಾಯಿ ಗಂಭೀರವಾದ ಘಟನೆ ಸುಳ್ಯದ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ನಡೆದಿದೆ.
ದೇರಪ್ಪಜ್ಜನ ಮನೆ ನಿವಾಸಿ ನಿತಿನ್(32) ಮೃತಪಟ್ಟಿದ್ದು, ತಾಯಿ ಸುಲೋಚನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ಮೂರು ದಿನಗಳ ಹಿಂದೆ ವಿಷ ಸೇವನೆ ಮಾಡಿದ್ದರು. ರವಿವಾರ ಮುಂಜಾನೆ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಮೃತ ನಿತಿನ್ ಅವರು ಐಟಿಐ ವಿದ್ಯಾಭ್ಯಾಸ ಮಾಡಿದ್ದು, ತಮ್ಮ ಜಮೀನಿನಲ್ಲೇ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಪತ್ನಿ ತವರಿಗೆ ಹೋಗಿದ್ದ ಸಂದರ್ಭದಲ್ಲಿ ತಾಯಿ ಮತ್ತು ಮಗ ಈ ಕೃತ್ಯ ಎಸಗಿದ್ದಾರೆ.
ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.