ಬೆಂಗಳೂರು: ದೊಡ್ಡ ನಗರಗಳಲ್ಲಿ ಯಾವುದೇ ಘಟನೆ ಘಟಿಸದೇ ಇರಲು ಸಾಧ್ಯವೇ? ಅಲ್ಲೊಂದು ಇಲ್ಲೊಂದು ಎಂಬಂತೆ ಮಹಿಳಾ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಆದರೆ ಪೊಲೀಸರ ಸೇವೆಯಿಂದ ನಗರದಲ್ಲಿ ಶಾಂತಿ ನೆಲೆಸಿದೆ ಎನ್ನುವ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.
ಸುದ್ದಗುಂಟೆಪಾಳ್ಯದಲ್ಲಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದು, ಇಂತಹ ಘಟನೆಗಳು ಸಾಮಾನ್ಯವಾಗಿ ಜನರ ಗಮನ ಸೆಳೆಯುತ್ತವೆ. ಪೊಲೀಸರ ಗಸ್ತು ಹೆಚ್ಚಿಸುವ ಜೊತೆಗೆ ಇರುವ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ನಾವು ಪೊಲೀಸ್ ಇಲಾಖೆಗೆ ಹೇಳುತ್ತಲೇ ಇರುತ್ತೇವೆ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ಗೃಹ ಸಚಿವರ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆಗೆ ಕಿರುಕುಳ ನೀಡುವ ವಿಷಯವನ್ನು ಸಾಮಾನ್ಯ ವಿಚಾರ ಎಂಬಂತೆ ಮಾತನಾಡಿದ್ದು, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆಯನ್ನು ಕುಗ್ಗಿಸುವಂತೆ ಮಾಡಿದೆ ಎಂದು ಜನಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.