ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕನ ಪ್ರೇಮ ವಿವಾಹ ಪ್ರಕರಣ ಕೇವಲ 15 ದಿನಗಳಲ್ಲೇ ಅಂತ್ಯವಾಗಿದೆ.
ಕೆಲ ದಿನಗಳ ಹಿಂದಷ್ಟೇ ಮೈಲಪ್ಪನ ಹಳ್ಳಿಯ ಫಸಿಯಾ ಮತ್ತು ನಾಗಾರ್ಜುನ ಎಂಬ ಜೋಡಿ ಪ್ರೇಮ ವಿವಾಹವಾಗಿತ್ತು. ಯುವತಿಯ ಮನೆಯವರ ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಿದ್ದರು. ಪೊಲೀಸರ ಸಮ್ಮುಖದಲ್ಲಿ ಯುವತಿಗೆ ಹೆತ್ತವರ ಜೊತೆ ಮಾತನಾಡಲು ಅವಕಾಶ ನೀಡಿದಾಗಲೂ ಆಕೆ ನಾಗಾರ್ಜುನನ ಜೊತೆಯೇ ಇರುವುದಾಗಿ ಹೇಳಿದ್ದಳು. ಮನೆಯವರ ಜೊತೆಗೆ ಹೋಗಲು ಒಪ್ಪಿರಲಿಲ್ಲ.
ಆದರೆ ಈಗ ಫಸಿಯಾ ತನ್ನ ತಾಯಿಯ ಅನಾರೋಗ್ಯದ ನೆಪ ಹೇಳಿ ಗಂಡ ನಾಗಾರ್ಜುನನಿಗೆ ಕೈಕೊಟ್ಟು ತವರು ಮನೆಗೆ ಹೋಗಿದ್ದಾಳೆ. ಇತ್ತ ಫಸಿಯಾಳನ್ನು ನಂಬಿ ಮದುವೆಯಾಗಿದ್ದ ನಾಗಾರ್ಜುನ ಕಂಗಾಲಾಗಿದ್ದಾನೆ. ಈ ಸಂಬಂಧ ಫಸಿಯಾ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದು ‘ನನ್ನ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನನ್ನ ನೋವಲ್ಲೇ ಕರಗಿ ಅವರಿಗೆ ಹೀಗಾಗಿದೆ’ ಎಂದಿದ್ದಾಳೆ.