ಬೆಂಗಳೂರು: ದೊಡ್ಜವರು, ದೊಡ್ಡ ಸ್ಥಾನದಲ್ಲಿ ಇರುವವರು ಇತರರಿಗೆ ಮಾದರಿ ಎನಿಸುವ ನಡವಳಿಕೆ ಹೊಂದಿರಬೇಕು. ಬಿ.ಎಸ್. ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಮೊದಲು ಅರಿವಿರಬೇಕಿತ್ತು ಎಂದು ಹೈಕೋರ್ಟ್ ತನ್ನ ಸೂಕ್ಷ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಜಾಮೀನು ನೀಡುವಾಗ ವಿಧಿಸಿರುವ ಷರತ್ತುಗಳನ್ನು ಸಡಿಲ ಮಾಡುವಂತೆ ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಸಲ್ಲಿಸಿರುವ ಮನವಿಯನ್ನು ವಿಚಾರಣೆ ಮಾಡಿರುವ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಯಡಿಯೂರಪ್ಪ ಪರ ವಾದ ಮಂಡಿಸಿದ ಅವರ ವಕೀಲರು, ಯಡಿಯೂರಪ್ಪ ಅವರು ಹಿರಿಯ ರಾಜಕಾರಣಿ. ಅವರಿಗೆ ಅನೇಕ ಸಂದರ್ಭದಲ್ಲಿ ಪ್ರವಾಸ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ದೇಶದಾದ್ಯಂತ ಹೋಗಲು ಅನುಮತಿ ನೀಡಬೇಕು ಎಂದು ಕೋರ್ಟ್‌ಗೆ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ಇಂತಹ ಅಹಿತರಕ ಪ್ರಕರಣದಲ್ಲಿ ಭಾಗಿಯಾಗುವ ಮುನ್ನ ಅವರಿಗೆ ಅರಿವಿರಬೇಕಿತ್ತು. ಉನ್ನತ ಸ್ಥಾನದಲ್ಲಿರುವ ದೊಡ್ಡವರು ಇತರರಿಗೆ ಮಾದರಿಯಾಗುವ ವ್ಯಕ್ತಿತ್ವ ಹೊಂದಿರಬೇಕು ಎಂದು ಮೌಖಿಕವಾಗಿ ತಿಳಿಸಿದೆ.
ಹಾಗೆಯೇ ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು, ಎಲ್ಲಾ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಅದನ್ನು ಪರಿಶೀಲಿಸಿದ ಬಳಿಕವಷ್ಟೇ ನ್ಯಾಯಾಲಯ ಜಾಮೀನಿನ ಷರತ್ತುಗಳ ಸಡಿಲಿಕೆಯ ಬಗ್ಗೆ ಆಲೋಚಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲಿಯ ವರೆಗೆ ಷರತ್ತುಗಳನ್ನು ಸಡಿಲ ಮಾಡದಂತೆ ವಿನಂತಿಸಿಕೊಂಡಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬೇಸಿಗೆ ರಜೆಯ ಬಳಿಕ ನಿಗದಿ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.