ಉಪ್ಪಿನಂಗಡಿ: ತಾಳಿ ಕಟ್ಟುವ ಶುಭ ವೇಳೆ, ಕೈಯ್ಯಲ್ಲಿ ಮಾಲೆ ಹಿಡಿದು ವರ ತಯಾರಾಗಿದ್ದ. ವರ ಮಹಾಶಯ ಮಾಲೆ ಹಾಕಿ ವಧುವಿನ ಕೊರಳಿಗೆ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ಆಕೆ ಆತನನ್ನು ಒಲ್ಲೆ ಎಂದಿದ್ದಾಳೆ. ಕೊನೆ ಕಷ್ಣದಲ್ಲಿ ಮದುಮಗಳು ಮದುವೆಗೆ ಒಪ್ಪಿದರೂ ವರಮಹಾಶಯನ ನಿರ್ಧಾರದಿಂದ ವಧುವಿನ ಕಡೆಯವರು ಶಾಖ್‌ಗೊಳಗಾಗಿದ್ದಾರೆ.
ಮದುವೆ ಮಂಟಪದಲ್ಲಿ ಕೊನೆಯ ಕ್ಷಣ ವರನಿಂದ ತಾಳಿ ಕಟ್ಟಲು ವಧು ನಿರಾಕರಸಿದ ಕಾರಣ ಮದುಮೆಯೇ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ವಧು ಈ ಮದುವೆ ನಿರಾಕರಿಸಿದ್ದು ಯಾಕೆ ಎನ್ನುವುದರ ಬಗ್ಗೆ ಆಕೆಯ ಮನೆಯವರು ನಿಗೂಢವಾಗಿ ಉಳಿಸಿದ್ದಾರೆ.
ಕೊಣಾಲು ಗ್ರಾಮದ ಕೋಲ್ಪೆ ದಿವಂಗತ ಬಾಬು ಗೌಡ ಅವರ ಪುತ್ರ ಉಮೇಶ ಎಂಬವರ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿವಂಗ ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.೨೬ ರಂದು ಬೆಳಗ್ಗೆ ೧೧.೩೫ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ದಾರೆ ಸೀರೆ ಹಾಕಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು. ಆದರೆ ತಾಳಿ ಕಟ್ಟಲು ಮುಂದಾದಾಗ `ನನಗೆ ಈ ಮದುವೆ ಇಷ್ಟ ಇಲ್ಲ’ ಎಂದು ವಧು ಹೇಳಿದ್ದಾಳೆ.
ಇದರಿಂದ ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾದರೂ ವಧು ತನ್ನ ನಿರ್ಧಾರ ಬದಲಿಸಲಿಲ್ಲ. ವಧುವಿನ ಹಠಮಾರಿತನದಿಂದ ಕಂಗಾಲಾದ ವರ ಮತ್ತೊಮ್ಮೆ ವಧುವಿನಲ್ಲಿ ಮದುವೆಗೆ ಒಪ್ಪುವಂತೆ ವಿನಂತಿಸಿದ. ಆದರೆ ವಧು ಮಾತ್ರ ತನ್ನ ಪಟ್ಟು ಬದಲಿಸದ ಕಾರಣ ಎರಡೂ ಕಡೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಪೊಲೀಸರು ವಧುವಿಗೆ ಸಾಕಷ್ಟು ಬುದ್ಧಿ ಹೇಳಿ ಈ ಮದುವೆಯನ್ನು ಒಪ್ಪುವಂತೆ ಆಗ್ರಹಿಸಿದ್ದಾರೆ. ಕೊನೆಗೆ ಪಟ್ಟು ಬದಲಿಸಿದ ವಧು ಮತ್ತೆ ಮದುವೆಗೆ ಒಪ್ಪಿದ್ದಾಳೆ. ಆದರೆ ವರ ಮಹಾಶಯನಿಗೆ ಏನನಿಸಿತೋ ಗೊತ್ತಿಲ್ಲ. ನನಗೆ ಈ ಮದುವೆಯೇ ಬೇಡ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ. ಕೊನೆಗೆ ಪೊಲೀಸರು ಏನೂ ಮಾಡಲು ಸಾಧ್ಯವಾಗದೆ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಮದುವೆಗೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿ ಸಿಹಿಯೂಟ ಮಾಡಲು ಬಂದಿದ್ದ ಕುಟುಂಬಿಕರು, ಬಂಧುಗಳು ಅಲ್ಲಿಂದ ತೆರಳಿದ್ದಾರೆ.
ಅಷ್ಟಕ್ಕೂ ವಧು ಮದುವೆಗೆ ನಿರಾಕರಿಸಿದ್ದು ಯಾಕೆ? ಇಷ್ಟೆಲ್ಲಾ ಖರ್ಚು ಮಾಡಿ ಕೊನೆ ಘಳಿಗೆಯಲ್ಲಿ ಆಕೆ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದೇಕೆ? ಎನ್ನುವ ಬಗ್ಗೆ ಮಾಹಿತಿಯನ್ನು ಕುಟುಂಬಿಕರು ಗುಟ್ಟಾಗಿ ಇಟ್ಟಿದ್ದಾರೆ.
ವಿಶೇಷವೆಂದರೆ ವರನ ಮನೆಯಲ್ಲಿ ಮಧ್ಯಾಹ್ನದ ಔತಣ ಕೂಟಕ್ಕೆ ಸುಮಾರು 500 ಜನರಿಗೆ ಮಾಂಸಾಹಾರಿ ಊಟ ತಯಾರಾಗಿತ್ತು. 1 ಸಾವಿರದಷ್ಟು ಐಸ್‌ಕ್ರೀಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಮದುವೆ ಮುರಿದು ಬಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.