ಉಡುಪಿ: ನಕಲಿ ಮತದಾನ ನಡೆದಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿದ್ದ ಘಟನೆಯ ಹಿಂದೆ ಹೆಸರಲ್ಲಿ ಉಂಟಾದ ಗೊಂದಲವೇ ಕಾರಣ ಎನ್ನುವುದನ್ನು ಅಧಿಕಾರಿಗಳ ತಂಡ ಪತ್ತೆ ಮಾಡಿದೆ.
ಅಂದ ಹಾಗೆ ಈ ಘಟನೆ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯಲ್ಲಿ ಮತದಾನ ದಿನವಾದ ನಿನ್ನೆ ನಡೆದಿದ್ದು, ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಆಗಮಿಸಿ ಮತದಾನ ಮಾಡಿದ್ದಾರೆಂಬ ಊಹಾಪೋಹ ಎದ್ದಿತ್ತು. ಮತಗಟ್ಟೆಗೆ ಅಳವಡಿಸಲಾದ ಕ್ಯಾಮೆರಾದಿಂದ ವೆಬ್ ಕಾಸ್ಟಿಂಗ್ ಮೂಲಕ ಆ ವ್ಯಕ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಅಷ್ಟಕ್ಕೂ ಘಟನೆಗೆ ಕಾರಣ ಏನು?
ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯಲ್ಲಿ ೩೮, ೩೯, ೪೦, ೪೧ ಒಟ್ಟು ಮತಗಟ್ಟೆಗಳಿದ್ದವು. ೪೦ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣ ನಾಯ್ಕ್ ಎಂಬವರು ೩೮ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣನಾಯ್ಕ್ ಎಂಬವರ ಹೆಸರಿನಲ್ಲಿ ಮತದಾನ ಮಾಡಿದ್ದರು. ಇಬ್ಬರ ಹೆಸರೂ ಒಂದೇ ಆಗಿದ್ದಲ್ಲದೆ ಇವರಿಬ್ಬರ ತಂದೆಯ ಹೆಸರೂ ವಾಸು ನಾಯ್ಕ್ ಎಂದಾಗಿತ್ತು. ಇದರಿಂದಲೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿತ್ತು ಎಂದು ತಿಳಿದುಬಂದಿದೆ. ಓಟು ಹಾಕುವ ಮುನ್ನ ಭಾವಚಿತ್ರವನ್ನು ಸರಿಯಾಗಿ ಗಮನಿಸಿದ್ದರೆ ಈ ಎಲ್ಲ ಗೊಂದಲಕ್ಕೆ ಕಾರಣವಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.