ಮಂಗಳೂರು: ಚುನಾವಣಾ ಆಯೋಗ ಪತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವಾಗ ಸಾಕಷ್ಟು ಎಚ್ಚರವಹಿಸಿದರೂ ಕೆಲವೊಂದು ಎಡವಟ್ಟುಗಳು ನಡೆಯುತ್ತಲೇ ಇರುತ್ತದೆ. ಇಂಥಾ ಪ್ರಮಾದಗಳಿಂದಾಗಿ ನಕಲಿ ಮತದಾನಗಳೂ ನಡೆಯುವ ಸಾಧ್ಯತೆ ಇರುತ್ತದೆ. ಇಬ್ಬರು ಮತದಾರರ ಹಾಗೂ ಅವರ ತಂದೆಯ ಹೆಸರು ಒಂದೇ ರೀತಿ ಇದ್ದುದರಿಂದ ಒಂದು ವಾರ್ಡಿನ ಮತದಾರರ ಮತ್ತೊಂದು ವಾರ್ಡಿನಲ್ಲಿ ಮತ ಹಾಕಿದ ಘಟನೆಯೂ ನಡೆದಿದೆ.
ಇದಕ್ಕಿಂತ ಒಂದು ಹೆಜ್ಜೆ ಹೋಗಿ ನಾಯಿ-ಹಸುಗಳೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದೆ ಎನ್ನವಂತೆ ಎರಡು ಮತ ಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹೆಸರುಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸಿದರೂ ಮತದಾರರ ಪಟ್ಟಿಯಲ್ಲಿ ಪ್ರಾಣಿಗಳೂ ಸ್ಥಾನ ಪಡೆದಿರುವುದನ್ನು ಕಂಡ ಸಾರ್ವಜನಿಕರು ಈ ರೀತಿಯ ಪ್ರಮಾದ ಎಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುತ್ತೂರು ಹಾಗೂ ಮಂಗಳೂರಿನಲ್ಲಿ ಗಡಸ್ ಮತ್ತು ಅಬ್ದುಲ್ ನಾಯಿ ಹೆಸರಿನ ಮತದಾನದ ಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಬ್ದುಲ್ ನಾಯಿ: ಈ ಚೀಟಿಯ ಪ್ರಕಾರ ಮತದಾರನ ಹೆಸರು ಅಬ್ದುಲ್ ನಾಯಿ ಅಂತ. ಅಷ್ಟಕ್ಕೂ ಇದರ ಅಧಿಕೃತ ಮತದಾರ ಯಾರೆಂದು ತಿಳಿದುಬಂದಿಲ್ಲ. ಅಬ್ದುಲ್ ನಾಯಿ ಎನ್ನುವ ಹೆಸರಿನ ವ್ಯಕ್ತಿ ಪುತ್ತೂರು ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದರ ಪ್ರಕಾರ ಈ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಐತ್ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಡಿ ನೆಟ್ಟಣಿಗೆ ಮುಳ್ಳೂರು ಗ್ರಾಮ ಎಂದು ಉಲ್ಲೇಖಗೊಂಡಿದೆ. ಇದು ಹೆಸರು ಸೇರ್ಪಡೆಗೊಂಡಾಗ ನಡೆದ ಪ್ರಮಾದವೋ ಅಥವಾ ನಕಲಿ ಹೆಸರೋ ಎನ್ನುವುದು ತಿಳಿದುಬಂದಿಲ್ಲ.
ಗಡಸ್: ಗಡಸ್ ಎಂದರೆ ತುಳುವಲ್ಲಿ ಹರೆಯಕ್ಕೆ ತಲುಪಿದ ಹಸು ಎಂದರ್ಥ. ಹರೆಯಕ್ಕೆ ತಲುಪಿದ ಹಸುವನ್ನು ತುಳುವಲ್ಲಿ ಗಡಸ್ ಎಂದು ಕರೆಯುತ್ತಾರೆ. ಮಂಗಳೂರು ನಗರದ ಉತ್ತರ ವ್ಯಾಪ್ತಿಯಲ್ಲಿ ಬರುವ ಈ ಗಡಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಲ್ಲೂರಿನ ಮತಪಟ್ಟಿಯಲ್ಲಿ ಹೆಸರು ಕಾಣಿಸುವಂತೆ ಈ ಚೀಟಿಯಲ್ಲಿ ಉಲ್ಲೇಖಗೊಂಡಿದೆ.
ಈ ಮತಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೆ, ಈ ರೀತಿಯ ಪ್ರಮಾದವನ್ನು ಸರಿಪಡಿಸದ ಚುನಾವಣಾ ಆಯೋಗಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥಾ ಪ್ರಮಾದಗಳಿಂದಲೇ ನಕಲಿ ಮತದಾನ ನಡೆಯಲು ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದ ನಡೆಯಬಾರದೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.