ಹಾಸನ; ಇಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿರುವ ಹರದನಹಳ್ಳಿ ಗೌಡರ ಕುಟುಂಬದ ಕುಡಿಯೊಬ್ಬ ಅಶ್ಲೀಲ ವಿಡಿಯೋ ಹಗರಣದಲ್ಲಿ ಸಿಲುಕಿಕೊಂಡಿರುವುದು ಗೌಡ ಕುಟುಂಬವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಪ್ರಜ್ವಲ್ ಬಗ್ಗೆ ಇಲ್ಲಿ ತನಕ ಅಂತಹ ಹೇಳಿಕೊಳ್ಳುವಂಥ ಗುರುತರ ಆರೋಪ ಇಲ್ಲದಿದ್ದರೂ ಪೆನ್ ಡ್ರೈವ್ ಹಗರಣ ಎಲ್ಲವನ್ನೂ ಮಸಿ ಬಳಿದಂತೆ ಮಾಡಿದೆ. ಇಷ್ಟಕ್ಕೂ ಪ್ರಜ್ವಲ್ ಹಿನ್ನೆಲೆ ಏನು ಎನ್ನುವುದನ್ನು ನೋಡೋಣ.
ಪ್ರಜ್ವಲ್ ರೇವಣ್ಣ ರಾಜಕೀಯ ಹಿನ್ನಲೆಯಿಂದಲೇ ಬಂದವರು. ದೇವೇಗೌಡರ ವಂಶದ ಕುಡಿ. ಮಾಜಿ ಸಚಿವ ಎಚ್ ಡಿ ರೇವಣ್ಣ-ಭವಾನಿ ರೇವಣ್ಣ ಪುತ್ರ. 1990 ರಲ್ಲಿ ಜನಿಸಿದ ಪ್ರಜ್ವಲ್ ಗೆ ಈಗ 33 ವರ್ಷ. ಇನ್ನೂ ಅವಿವಾಹಿತ. ವಿದ್ಯಾಭ್ಯಾಸದ ವಿಚಾರಕ್ಕೆ ಬಂದರೆ ಪ್ರಜ್ವಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ವಿದೇಶದಲ್ಲಿ ಎಂಟೆಕ್ ಮಾಡಲು ಹೋಗಿ ಅರ್ಧಕ್ಕೇ ಬಿಟ್ಟರು. ಬಳಿಕ ರಾಜಕೀಯಕ್ಕೆ ಸೇರಿಕೊಂಡರು.
ತಾತ ಎಚ್ ಡಿ ದೇವೇಗೌಡ ತಮ್ಮ ಸ್ವ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟರು. 2019 ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಸಂಸದರಾಗಿ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. ಕಳೆದ 8 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಮತ್ತೊಮ್ಮೆ ಹಾಸನದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ವೇಳೆ ಅವರ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ಸುಮಾರು 40.84 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರ ಬಳಿ 9.29 ಲಕ್ಷ ನಗದು, ಮೌಲ್ಯಯುತ ಆಸ್ತಿಗಳಿಗೆ ಒಡೆಯರಾಗಿದ್ದಾರೆ. 2019 ರ ಲೋಕಸಭೆ ಚುನಾವಣೆ ವೇಳೆ ತಮ್ಮ ಆಸ್ತಿ ಮೌಲ್ಯ 10 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಇದೀಗ 40 ಕೋಟಿ ರೂ.ಗೆ ಏರಿಕೆಯಾಗಿದೆ. ಹೊಳೆನರಸೀಪುರದಲ್ಲಿ ಕೃಷಿ ಭೂಮಿ, ಮೈಸೂರಿನಲ್ಲಿ ವಾಣಿಜ್ಯ ಮಳಿಗೆ, ನೆಲಮಂಗಲದಲ್ಲಿ ಕೃಷಿಯೇತರ ಭೂಮಿಗಳನ್ನು ಹೊಂದಿದ್ದಾರೆ.