ಮಂಗಳೂರು: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಇವರು ಗಳಿಸಿದ ಮತಗಳು ಮತಯಂತ್ರದಲ್ಲಿ ಭದ್ರವಾಗಿದೆ. ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದಕ್ಕಿಂತ ಮುಂಚೆ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವ ಬಗ್ಗೆ ಭಾರೀ ಬೆಟ್ಟಿಂಗ್ ನಡೆಯುತ್ತಿದೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಬೆಟ್ಟಿಂಗ್ ನಡೆದಿದೆ ಎನ್ನುವುದು ವಿಶೇಷ. ಕಳೆದ 15 ವರ್ಷಗಳಿಂದ ಇಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿರಲಿಲ್ಲ. ಆದರೆ ಈ ಬಾರಿ ಬಿಜೆಪಿಯಿಂದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ನಿರಾಕರಿಸಿ ಹೊಸ ಮುಖ ಬ್ರಿಜೇಶ್ ಚೌಟಾರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಆರ್. ಪದ್ಮರಾಜ್‌ಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಕಾಂಗ್ರೆಸ್ ಎದುರು ಬಿಜೆಪಿ ಸೋಲಬಹುದು ಎನ್ನುವ ನಿರೀಕ್ಷೆಯಿಂದ ಬೆಟ್ಟಿಂಗ್‌ದಾರರು ಕೈ ಅಭ್ಯರ್ಥಿ ಪರ ಬೆಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಪದ್ಮರಾಜ್ ಪರ ಬೆಟ್ಟಿಂಗ್ ನಡೆಯಲು ಕಾರಣವೂ ಇದೆ.
ಎಸ್‌ಡಿಪಿಐ ಕಾಂಗ್ರೆಸ್‌ಗೆ ಬೆಂಬಲ!; ಈ ಬಾರಿ ಎಸ್‌ಡಿಪಿಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ಸೂಚಿಸಿದೆ. ಮುಸ್ಲಿಂ ಸಮುದಾಯದ ಸಂಪೂರ್ಣ ಮತಗಳು ಕಾಂಗ್ರೆಸ್‌ಗೆ ನೀಡುವಂತೆ ಸಮುದಾಯದ ಮುಖಂಡರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಹೊರದೇಶಗಳಲ್ಲಿರುವ ಅನಿವಾಸಿ ಮುಸ್ಲಿಂ ಭಾರತೀಯರೂ ಭಾರತಕ್ಕೆ ಆಗಮಿಸಿ ಮತದಾನ ಮಾಡಿದ್ದು, ಇದು ಕಾಂಗ್ರೆಸ್‌ಗೆ ಪ್ಲಸ್ ಆಗುವ ನಿರೀಕ್ಷೆ ಬೆಟ್ಟಿಂಗ್‌ದಾರರದ್ದು!. ಕಳೆದ ಬಾರಿ ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಮೊಹಮ್ಮದ್ ಇಲಿಯಾಸ್ ೪೬೮೩೯ ಮತಗಳನ್ನು ಪಡೆದಿದ್ದು, ಈ ಬಾರಿ ಸರಿಸುಮಾರು ಅಷ್ಟೂ ಮತಗಳು ಕಾಂಗ್ರೆಸ್ ತೆಕ್ಕೆಗೆ ಸೇರಲಿದೆ ಎನ್ನುವುದು ಬೆಟ್ಟಿಂಗ್ ಮಾಡುವವರ ಲೆಕ್ಕಾಚಾರ. ಅಲ್ಲದೆ ಈ ಬಾರಿ ಮುಸ್ಲಿಂ ಹೊಸ ಮತದಾರರ ಸಂಖ್ಯೆಯೂ ಹೆಚ್ಚಿರುವುದರಿಂದ ಕಾಂಗ್ರೆಸ್‌ಗೆ ಪ್ಲಸ್ ಆಗಬಹುದು. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ೪೯೯೬೬೪ ಮತಗಳನ್ನು ಪಡೆದಿದ್ದರು. ಬಿಜೆಪಿಯ ನಳಿನ್ ಕುಮಾರ್ ಕಟೀಲ್ ೭೭೪೨೮೫ ಮತಗಳನ್ನು ಪಡೆದಿದ್ದು, ಈ ಬಾರಿ ಉಳಿದ ಸುಮಾರು 2 ಲಕ್ಷ ಮತಗಳ ಮೇಲೆ ಆಟ ನಡೆಯಬೇಕು.
ಜಾತಿ ರಾಜಕೀಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಕಾಣಿಸದ ಜಾತಿ ರಾಜಕೀಯ ಈ ಬಾರಿ ಕಾಣಿಸಿತು. ಬಂಟ ವರ್ಸಸ್ ಬಿಲ್ಲವ ಎಂಬರ್ಥದಲ್ಲಿ ಕೆಲವು ಜಾತಿವಾದಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿ ಜಾತಿ-ಜಾತಿಗಳ ನಡುವೆ ಎತ್ತಿಕಟ್ಟಿದರು. ಪದ್ಮರಾಜ್ ಅವರನ್ನು ಬಿಲ್ಲವ ಎಂದು ಬಿಂಬಿಸಿ ಬಿಲ್ಲವರು ಕಾಂಗ್ರೆಸ್ ಬೆಂಬಲಿಸಬೇಕೆಂದು ಪ್ರಚಾರದಲ್ಲಿ ತೊಡಗಿರುವುದರಿಂದ ಈ ಬಾರಿ ಹೆಚ್ಚು ಬಿಲ್ಲವ ಮತಗಳು ಕಾಂಗ್ರೆಸ್‌ಗೆ ಬೀಳಬಹುದು ಎನ್ನುವ ಲೆಕ್ಕಾಚಾರ ಬೆಟ್ಟಿಂಗ್‌ದಾರರದ್ದು.
ನೋಟಾ ಅಭಿಯಾನ: ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನೋಟಾ ಅಭಿಯಾನ ನಡೆಯಿತು. ಕಳೆದ ಬಾರಿ ೭೩೮೦ ನೋಟಾ ಚಲಾವನೆಯಾಗಿತ್ತು. ಆದರೆ ಈ ಬಾರಿ ಸುಮಾರು 50,000 ದವರೆಗೆ ನೋಟಾ ಚಲಾವನೆಯಾಗಬಹುದು. ಹೀಗೆ ಚಲಾವನೆಯಾಗುವ ನೋಟಾ ಮತಗಳು ಬಿಜೆಪಿ ಬತ್ತಳಿಕೆಯಿಂದಲೇ ಖಾಲಿಯಾಗುವುದರಿಂದ ಕಾಂಗ್ರೆಸ್‌ಗೆ ಇದರಿಂದ ಯಾವ ನಷ್ಟವೂ ಆಗುವುದಿಲ್ಲ. ಇದರಿಂದ ಪರೋಕ್ಷವಾಗಿ ಕಾಂಗ್ರೆಸ್‌ಗೆ ಸಹಕಾರಿಯಾಗಬಹುದು ಎನ್ನುವುದು ಬೆಟ್ಟಿಂಗ್‌ದಾರರ ಇನ್ನೊಂದು ಲೆಕ್ಕಾಚಾರ.
ಹೊಸ ಮುಖಗಳು; ಬ್ರಿಜೇಶ್ ಚೌಟರಿಗೆ ಈ ಬಾರಿ ಟಿಕೆಟ್ ಸಿಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮೋದಿಯ ಹೆಸರಲ್ಲಿ ತನಗೆ ಗೆಲವುವಾಗಬಹುದು ಎನ್ನುವ ಅತಿ ಆತ್ಮವಿಶ್ವಾಸವೂ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಬಹುದು. ಪದ್ಮರಾಜ್‌ಗೆ ಹೋಲಿಸಿದರೆ ಚೌಟರ ಪ್ರಚಾರದ ಅಬ್ಬರ ಕಡಿಮೆಯಾಗಿತ್ತು. ಬಿಜೆಪಿ ಮುಖಂಡರು ಚೌಟರ ಪರವಾಗಿ ಸಮಾವೇಶ ನಡೆಸಿದ್ದು ತೀರಾ ಕಡಿಮೆ. ಪ್ರಚಾರಕ್ಕೆ ಹಣವನ್ನೂ ಜಾಸ್ತಿ ಖರ್ಚು ಮಾಡಲಿಲ್ಲ. ಮಾಧ್ಯಮಗಳನ್ನು ಚೌಟ ದೂರವಿಟ್ಟು ಸೋಷಿಯಲ್ ಮೀಡಿಯಾವನ್ನೇ ನಂಬಿದರು.
ಆದರೆ ಪದ್ಮರಾಜ್ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡರು. ಕೈ ಮುಖಂಡರು ತನ್ನ ಕಿಸೆಯಿಂದ ಹಣ ಹಾಕಿ ಪದ್ಮರಾಜ್ ಪರ ಪ್ರಚಾರ, ಸಮಾವೇಶ ನಡೆಸಿದರು. ಅಲ್ಲದೆ ಐದು ಗ್ಯಾರಂಟಿಗಳ ವಿಚಾರವನ್ನು ಮನೆ ಮನೆಗೆ ಮುಟ್ಟಿಸಿ ಕಾಂಗ್ರೆಸ್ ಗೆದ್ದರೆ ನಿಮಗೆ ವರ್ಷಕ್ಕೆ ಒಂದು ಲಕ್ಷ ಸಿಗವುದು ಎಂದು ಮನೆಯ ವಿವರಗಳನ್ನು ಪಡೆದು ನಂಬಿಸುವ ಮೂಲಕ ವಿಶೇಷ ಪ್ರಚಾರದಲ್ಲಿ ತೊಡಗಿದ್ದರಿಂದ ಕಾಂಗ್ರೆಸ್‌ಗೆ ಇದು ವರವಾಗಬಹುದು ಎನ್ನುವುದು ಕೂಡಾ ಬೆಟ್ಟಿಂಗ್‌ದಾರರು ಪದ್ಮರಾಜ್ ಪರ ನಿಲ್ಲಲು ಒಂದು ಕಾರಣ.
ಅಪಪ್ರಚಾರ: ಈ ಬಾರಿ ಕೈ-ಕಮಲ ಪಡೆಗಳು ತಮ್ಮ ಪಕ್ಷದ ಪ್ರಚಾರ ಮಾಡುವುದನ್ನು ಬಿಟ್ಟು ಅಪಪ್ರಚಾರದಲ್ಲಿ ತೊಡಗಿದರು. ಬಂಟ ಬ್ರಿಗೇಡ್ ಹೆಸರಲ್ಲಿ ನಕಲಿ ಪತ್ರವೊಂದು ವೈರಲ್ ಆಗಿದ್ದಲ್ಲದೆ, ತನಗೆ ಮುಸ್ಲಿಂ ಮತಗಳು ಸಾಕು ಎಂದು ಪದ್ಮರಾಜ್ ಹೇಳಿದ್ದಾರೆನ್ನುವ ರೀತಿ ಪತ್ರಿಕಾ ವರದಿ ರೀತಿಯ ನಕಲಿ ವರದಿಯಿಂದ ಮತದಾರರು ಗೊಂದಲಕ್ಕೆ ಒಳಗಾಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಅಪಪ್ರಚಾರ ಮಾಡುವ ರೀತಿ ನಕಲಿ ಪೋಸ್ಟರ್‌ಗಳು, ಸಂದೇಶಗಳು ರವಾನೆಯಾಗಿದ್ದು, ಇದಕ್ಕೆ ಪೂರಕ ಎನಿಸುತ್ತಿದೆ.
ಸಂಪ್ರದಾಯಿಕ ಮತಗಳು: ಇಷ್ಟೆಲ್ಲ ಪರಿಸ್ಥಿತಿಗಳ ನಡುವೆ ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಗಳು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಹೊಸ ಮತದಾರರ ಸಂಖ್ಯೆಯೂ ಜಾಸ್ತಿ ಇರುವುದರಿಂದ ಇವುಗಳು ನಿರ್ಣಾಯಕ ಪರಿಣಾಮವನ್ನು ಉಂಟು ಮಾಡುತ್ತದೆ. ಅಲ್ಲದೆ ಈ ಬಾರಿ ಮತದಾನದ ಪ್ರಮಾಣವೂ ಶೇಖಡವಾರು ಹೆಚ್ಚಿರುವುದರಿಂದ ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಬೆಟ್ಟಿಂಗ್‌ದಾರರ ಲೆಕ್ಕಾಚಾರ. ಆದರೆ ಮತದಾರರ ಆಶಯ ಏನಿದೆ ಎನ್ನುವುದು ನಿಗೂಢ. ನಿಜವಾಗಿಯೂ ಗೆಲುವಿನ ಮಾಲೆ ಯಾರಿಗೆ ಬೀಳುತ್ತದೆ ಎನ್ನುವುದು ಜೂನ್ 4ರ ಮಧ್ಯಾಹ್ನವೇ ಗೊತ್ತಾಗಬೇಕು.