ಮುಂಬೈ: ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಬಂಧು ಬಳಗ ಚಿತ್ರದಲ್ಲೂ ನಟಿಸಿರುವ ಪೂನಂ ಕೌರ್ ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದಿದ್ದಾರೆ. ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
2800ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿವೆ. ಮಹಿಳೆಯರಿಗೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದಿರುವ ಪೂನಂ ಕೌರ್ , ಹಣ ಮತ್ತು ರಾಜಕೀಯದ ಪ್ರಭಾವ ಇರುವ ಹಿನ್ನೆಲೆ, ಸರ್ಕಾರದಿಂದ ಕೂಡ ತಪ್ಪಿಸಿಕೊಂಡ ಎಂದಿದ್ದಾರೆ. ಕರ್ನಾಟಕದಿಂದ ಕಾಲ್ಕಿತ್ತು ಸದ್ಯಕ್ಕೆ ಪ್ರಜ್ವಲ್ ಜರ್ಮನಿಯಲ್ಲಿ ನೆಮ್ಮದಿಯಾಗಿದ್ದಾನೆ. ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದಿರುವ ಪೂನಂ ಕೌರ್ ಇಂಥವರಿಗೆ ಮತ ಹಾಕಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಜನ ತಿರುಗಿ ಬೀಳುವವರಿಗೂ ಇಂತವರನ್ನ ಶಿಕ್ಷಿಸಲು ಸಾಧ್ಯ ಇಲ್ಲ ಎಂದಿದ್ದಾರೆ.
ಹೆಣ್ಣನ್ನೂ ಶಕ್ತಿ ಎಂದು ಪೂಜಿಸುವ ದೇಶದಲ್ಲಿ ಇಂತಹ ನೀಚರನ್ನ ಗೆಲ್ಲಿಸಬೇಕಾ ಎಂದು ಪ್ರಶ್ನೆಯನ್ನು ಕೇಳಿರುವ ಪೂನಂ ಕೌರ್, ಯಾರಿಗೆ ಮತ ಹಾಕಬೇಕೆಂದು, ಯೋಚಿಸಿ ಮತ ಹಾಕಿ ಅಂದಿದ್ದಾರೆ. ಮಹಿಳೆಯರಿಗೆ ರಕ್ಷಣೆ ಕೊಡುವ ಸರ್ಕಾರಕ್ಕೆ ನಿಮ್ಮ ಮತ ಹಾಕಿ ಎಂದಿದ್ದಾರೆ. ಅನ್ಯಾಯ ಮಾಡುವವರಿಗೆ ಅಧಿಕಾರ ಕೊಡಬೇಡಿ ಎಂದಿದ್ದಾರೆ
ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಗೆ ಅಧಿಕಾರದ ಗದ್ದುಗೆ ಸಿಕ್ಕರೆ ಏನೆಲ್ಲ ಆಗಬಹುದು ಎಂದು ಒಮ್ಮೆ ಯೋಚಿಸಿ ಎಂಬ ಮನವಿಯನ್ನೂ ಕೂಡ ಪೂನಂ ಕೌರ್ ಮಾಡಿದ್ದಾರೆ. ಮಹಾತ್ಮ ಗಾಂಧಿ ಕಂಡ ಕನಸಿನ ರಾಮ ರಾಜ್ಯದತ್ತ ನಾವು ಹೋಗ್ತಿದ್ದೇವಾ ಅಥವಾ ರಾವಣನ ಸಾಮ್ರಾಜ್ಯ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದೇವಾ ಅನ್ನುವ ಪ್ರಶ್ನೆಯನ್ನ ಕೂಡ ಕೇಳಿದ್ದಾರೆ ಪೂನಂ ಕೌರ್.