ಬೆಂಗಳೂರು: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆಗೆ ಮೇ ತಿಂಗಳು ಕೊನೆ. ಅಷ್ಟರಲ್ಲೇ ಇದೀಗ ಮತ್ತೊಂದು ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವೊಂದು ಹಳೇ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿ ಕೊಡುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಫಿಯೆಟ್, ಅಂಬಾಸಿಡರ್, ಸಿಯೆಲೊ, ಮ್ಯಾಟಿಜ್, ಒಪೆಲ್, ಹೀರೋ ಪುಚ್, ಎಲ್ಎಂಎಲ್, ಕೈನೆಟಿಕ್ ಹೋಂಡಾ ಮತ್ತಿತರ ಮಾಡೆಲ್ನ ವಾಹನ ಹೊಂದಿರುವ ಹಲವು ಮಂದಿ ಮಾಲೀಕರು ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ. ಇದೀಗ ಈ ಸಮಸ್ಯೆಗೆ ಸಂಬಂಧಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲು ಕರ್ನಾಟಕ ಸಾರಿಗೆ ಇಲಾಖೆ (Karnataka transport dept) ಮುಂದಾಗಿದೆ.
ವಾಹನ ತಯಾರಿಕಾ ಕಂಪೆನಿಗಳ ಮೂಲಕ ಮಾತ್ರವೇ ಎಚ್ಎಸ್ಆರ್ಪಿ ಅಳವಡಿಸಲು ಸದ್ಯ ಅವಕಾಶವಿದೆ. ಮೇಲೆ ಉಲ್ಲೇಖಿಸಿರುವ ಮಾಡೆಲ್ಗಳ ಹಳೆಯ ವಾಹನಗಳ ತಯಾರಿಕಾ ಕಂಪೆನಿಗಳು ಈಗ ಮುಚ್ಚಿವೆ. ಹೀಗಾಗಿ ಆ ವಾಹನಗಳ ಮಾಲೀಕರಿಗೆ ಎಚ್ಎಸ್ಆರ್ಪಿ ಅರ್ಜಿ ಸಲ್ಲಿಸಲು ಆಯ್ಕೆಯೇ ಇಲ್ಲವಾಗಿದೆ. ಎಚ್ಎಸ್ಆರ್ಪಿ ಪಡೆಯಲು ವಾಹನ ಮಾಲೀಕರು ರಾಜ್ಯ ಸಾರಿಗೆ ಇಲಾಖೆಯ ವೆಬ್ಸೈಟ್ (transport.karnataka.gov.in) ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ವಾಹನಗಳ ಕಂಪೆನಿಯನ್ನು ಆಯ್ಕೆ ಮಾಡುವ ಮೂಲಕ ಅದನ್ನು ಬುಕ್ ಮಾಡಬೇಕು. ಹಳೆಯ ವಾಹನ ಮಾಲೀಕರಿಗೆ ಕಂಪೆನಿಯೇ ಮುಚ್ಚಿರುವುದರಿಂದ ಎಚ್ಎಸ್ಆರ್ಪಿ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸಾರಿಗೆ ಇಲಾಖೆಯು ಕೂಡ ಹಳೆಯ ವಾಹನ ಮಾಲೀಕರಿಂದ ಮನವಿಗಳನ್ನು ಸ್ವೀಕರಿಸಿದೆ. ಇಂತಹ ಕೆಲವು ಸಾವಿರ ವಾಹನಗಳು ರಾಜ್ಯದಲ್ಲಿದ್ದು, ಯಾವುದೇ ಆಯ್ಕೆಗಳಿಲ್ಲದ ಕಾರಣ ಅವರಿಗೆ ಎಚ್ಎಸ್ಆರ್ಪಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಪರಿಸ್ಥಿತಿಯನ್ನು ವಿವರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಸಾರಿಗೆ ಇಲಾಖೆ ಎಚ್ಎಸ್ಆರ್ಪಿ ಅಳವಡಿಕೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಅದರಂತೆ, 2019 ರ ಏಪ್ರಿಲ್ 1 ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳು ಎಚ್ಎಸ್ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈವರೆಗೆ, ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದ್ದು, ಪ್ರಸ್ತುತ ಗಡುವು ಮೇ 31 ಕ್ಕೆ ಕೊನೆಗೊಳ್ಳಲಿದೆ.