ಉಡುಪಿ: ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಡುಪಿಯ ಮಾಜಿ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಕಳೆದ ಅವಧಿಯಲ್ಲಿ ತಾನೇ ಬೆಳೆಸಿದ ಶಿಷ್ಯ ಯಶ್ ಪಾಲ್ ಸುವರ್ಣಗೆ ಉಡುಪಿಯಿಂದ ಪಕ್ಷ ಸ್ಪರ್ಧಿಸಲು ಅವಕಾಶ ಕೊಟ್ಟಾಗಲೂ ಪಕ್ಷದ ವಿರುದ್ಧ ಬಂಡಾಯ ಏಳದೆ ತನ್ನ ಶಿಷ್ಯನನ್ನು ಗೆಲ್ಲಿಸಿಕೊಂಡು ಬಂದಿದ್ದ ರಘುಪತಿ ಭಟ್ ಗೆ ಬಿಜೆಪಿ ಪದವೀಧರ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದ್ದು ಬಿಜೆಪಿಯ ನೈಜ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಘುಪತಿ ಅವರನ್ನು ಬಿಜೆಪಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಕ್ಷೇತ್ರದಲ್ಲಿ ಶಿವಮೊಗ್ಗದಿಂದ ವೈದ್ಯ ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಕಣಕ್ಕಿಳಿಸಿದೆ. ಭಟ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿದ್ದರು. 2004, 2008, 2018ರ ಚುನಾವಣೆಯಲ್ಲಿ ಉಡುಪಿಯಿಂದ ಗೆದ್ದಿದ್ದರು. 2023 ರ ಚುನಾವಣೆಯಲ್ಲಿ ಬಿಜೆಪಿಯು ಉಡುಪಿಯಲ್ಲಿ ಶ್ರೀ ಭಟ್ ಬದಲಿಗೆ ಯಶಪಾಲ್ ಸುವರ್ಣ ಅವರನ್ನು ನೇಮಿಸಿತು. ಭಟ್ ಅವರು ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ಪಕ್ಷದಲ್ಲಿ ಹಿರಿಯರನ್ನು ಬದಿಗೊತ್ತಿ ವಿಧಾನಪರಿಷತ್ ಚುನಾವಣೆಯಲ್ಲಿ ಕಿರಿಯರನ್ನು (ಡಾ. ಸರ್ಜಿ) ಕಣಕ್ಕಿಳಿಸಿದೆ ಎಂದು ಭಟ್ ಆರೋಪಿಸಿದ್ದಾರೆ. ಡಾ.ಸರ್ಜಿ ಒಂದು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾದವರು.
ಹರ್ಷ ಹತ್ಯೆ ಸಂದರ್ಭದಲ್ಲಿ ಕಮ್ಯುನಿಸ್ಟ್ ಸೇರಿದಂತೆ ಪ್ರಗತಿಪರರ ಜೊತೆ ಬಿಜೆಪಿ ವಿರುದ್ಧವೇ ಹೋರಾಟ ನಡೆಸಿದವರನ್ನು ಬಿಜೆಪಿ ರೆಡ್ ಕಾರ್ಪೆಟ್ ಹಾಸಿ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದು ಬಿಜೆಪಿ ಮತ್ತು ನೈಜ ಅರೆಸ್ಸೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ