ಮಂಗಳೂರು: ನಕಲಿ ಹಕ್ಕು ಪತ್ರಗಳನ್ನು ನೀಡಿ ಜನ ಸಾಮಾನ್ಯರನ್ನು ವಂಚಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿದೆ.
ವಿಶೇಷವೆಂದರೆ ಈ ನಕಲಿ ಹಕ್ಕುಪತ್ರಗಳಲ್ಲಿರುವ ಅಧಿಕಾರಿಗಳ ಸಹಿಯ ಬಗ್ಗೆ ಭಾರೀ ಅನುಮಾನ ಹುಟ್ಟಿಸುತ್ತಿದೆ. ಯಾಕೆಂದರೆ ಸಹಿ ಕೂಡಾ ನಕಲಿಯೋ ಅಥವಾ ಅಸಲಿಯೋ? ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿದ್ದಾರಾ ಎನ್ನುವ ಅನುಮಾನ ಹುಟ್ಟಿಸುತ್ತಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ನಕಲಿ ಹಕ್ಕು ಪತ್ರಗಳನ್ನು ನೀಡಿ ಲಕ್ಷಗಟ್ಟಲೆ ಹಣ ಪಡೆದು ಹಲವಾರು ಮಂದಿಗೆ ವಂಚಿಸಿರುವ ಬಗ್ಗೆ ‘ಮಂಗ್ಳೂರ್ ಬೀಟ್’ ಪತ್ರಿಕೆಗೆ ಮಾಹಿತಿ ಲಭ್ಯವಾಗಿದೆ.
ವಿಶೇಷವೆಂದರೆ ಈ ವಂಚನೆಯ ಬಗ್ಗೆ ಮಂಗಳೂರು ತಹಶಿಲ್ದಾರ್ ಅವರ ಗಮನಕ್ಕೂ ಬಂದಿದೆಯಂತೆ. ಆದರೆ ತಹಶಿಲ್ದಾರ್ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಇದುವರೆಗೆ ಸುಮಾರು 30ಕ್ಕೂ ಹೆಚ್ಚು ನಕಲಿ ಪತ್ರಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆಯೂ ತಹಶಿಲ್ದಾರ್ ಅವರ ಗಮನಕ್ಕೆ ತರಲಾಗಿದೆ ಎನ್ನಲಾಗಿದೆ. ಆದರೆ ಆರೋಪ ಕೇಳಿ ಬಂದು ಹಲವು ದಿನಗಳು ಕಳೆದರೂ ತಹಶಿಲ್ದಾರ್ ಮಾತ್ರ ಏನು ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಕಲಿ ಹಕ್ಕುಪತ್ರ ದಂಧೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಹೇಳುತ್ತಿರುವ ತಹಶಿಲ್ದಾರ್, ಅದೇನು ಇದ್ದರೂ ನಮ್ಮ ಆರ್.ಐ. ಅವರು ತನಿಖೆ ಮಾಡುತ್ತಾರೆ ಎಂದೇ ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಂತ್ರಸ್ತರಿಂದ ಕೇಳಿಬರುತ್ತಿದೆ.
ಅನುಮಾನ ಹುಟ್ಟಿಸಿದ ಸಹಿ!
ನಕಲಿಹಕ್ಕು ಪತ್ರಗಳಲ್ಲಿ ಕಾಣಿಸಿದ ಅಧಿಕಾರಿಗಳ ಸಹಿಯ ಬಗ್ಗೆಯೂ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಸಹಿಯನ್ನು ಪೋರ್ಜರಿ ಮಡಲಾಗಿದೆಯೋ ಅಥವಾ ನಕಲಿ ಹಕ್ಕುಪತ್ರಗಳ ಮೇಲೆ ಸಹಿ ಹಾಕಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.
ಲೋಕಾಯುಕ್ತ ತನಿಖೆಗೆ ಆಗ್ರಹ!
ನಕಲಿ ಹಕ್ಕುಪತ್ರ ವಂಚನೆಗಳ ಬಗ್ಗೆ ಹಲವು ಆರೋಪಗಳು ಕೇಳಿಬಂದಿದೆ ಅದರಲ್ಲಿರುವ ಅಧಿಕಾರಿಗಳ ಸಹಿ ಬಗ್ಗೆಯೂ ಅನುಮಾನ ಹುಟ್ಟಿಸುತ್ತಿದೆ. ಇದನ್ನೆಲ್ಲಾ ನೋಡುವಾಗ ಈ ದಂಧೆಯಲ್ಲಿ ಕೋಟ್ಯಾಂತರ ಹಣ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಸ್ವಂತ ಆಸ್ತಿಯ ಕನಸು ಹೊಂದಿರುವ ಅಮಾಯಕ ಬಡ ಜನರು ಈ ದಂಧೆಗೆ ಸಿಲುಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರಿಯಾದ ರೀತಿ ತನಿಖೆ ನಡೆಸಿ ಈ ಪ್ರಕರಣದ ಸತ್ಯಸತ್ಯಾತೆಯನ್ನು ಬಹಿರಂಗಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸಬೇಕೆನ್ನುವ ಆಗ್ರಹ ಸಾರ್ವಜನಿಕವಾಗಿ ಕೇಳಿಬರುತ್ತಿದೆ.