ಮಂಗಳೂರು; ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರೇ ನೀವು ನವೆಂಬರ್ 14 ರಿಂದ 18ರ ವರೆಗೆ ‘ ಪಿಲಿಕುಳ ನಿಸರ್ಗ ಧಾಮದಲ್ಲಿ ಪಿಲಿಕುಳೋತ್ಸವ’ ಆಯೋಜಿಸಲು ಹೊರಟಿದ್ದೀರಿ.. ಇದಕ್ಕಾಗಿ ನೀವು ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಮನವಿಯನ್ನೂ ಮಾಡಿದ್ದೀರಿ.
ಪಿಲಿಕುಳದಲ್ಲಿ ಕಂಬಳ ಸ್ಥಗಿತಗೊಂಡಿರುವ ಬೇಜಾರಿನಲ್ಲಿ ನೀವು ಅಲ್ಲಿನ ವೈಭವವನ್ನು ಮರುಸ್ಥಾಪಿಸಲು ತಾವು ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಸಾಂಸ್ಕೃತಿಕ ಉತ್ಸವ ಜರುಗಿಸಲು ಮುಂದಾಗಿದ್ದೀರಿ.
ನವೆಂಬರ್ 14 ರಿಂದ 18 ರವರೆಗೆ ಮಕ್ಕಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ, ಮಕ್ಕಳ ಹಬ್ಬ, ಜಿಲ್ಲಾ ಮಟ್ಟದ ಜನಪದ ಕ್ರೀಡಾ ಕಾರ್ಯಕ್ರಮ, ಕಂಬಳ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ರೂಪುರೇಷೆ ಸಿದ್ಧಪಡಿಸಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ, ಅನುಮೋದನೆ ಪಡೆದು, ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ್ದೀರಿ.
ಸಂತೋಷ…
ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಆಸಕ್ತಿ ಮೂಡಿಸಲು ಹಾಗೂ ನಾಡಿನ ಸಾಂಸ್ಕೃತಿಕ, ಜನಪದ ವೈಭವವನ್ನು ಮೇಳೈಸಲು ನೀವು ಮಾಡಹೊರಟ ಕಾರ್ಯಕ್ರಮ ಮೆಚ್ಚತಕ್ಕದ್ದೇ…
ಆದರೆ……. ಮಿಸ್ಟರ್ ಭಂಡಾರಿಯವರೇ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿರುವ ಪ್ರಾಣಿಗಳ ದೈನಸಿ ಸ್ಥಿತಿ ನೋಡಿದ್ದರೆ ನೀವು ಈ ಕಾರ್ಯಕ್ರಮ ನಡೆಸಲು ಖಂಡಿತಾ ಮುಂದಾಗುತ್ತಿರಲಿಲ್ಲ. ನೀವು ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಖರ್ಚು(ಪೋಲು) ಮಾಡುವ ಹಣವನ್ನು ಆ ಜೀವಂತ ಶವಗಳಂತಿರುವ ಪ್ರಾಣಿಗಳಿಗೆ ಖರ್ಚು ಮಾಡಿದ್ದರೆ ಪುಣ್ಯ ಬರುತ್ತಿತ್ತು. ಅದು ಬಿಟ್ಟು ಈ ಕಾರ್ಯಕ್ರಮ ನಡೆಸಿ ನೀವು ಸಾಧಿಸಹೊರಟಿದ್ದಾದರೂ ಏನನ್ನು?
ನಾಲ್ಕು ಹಾವು, ನಾಲ್ಕು ಹುಲಿ, ನಾಲ್ಕು ಜಿಂಕೆ ಹೀಗೆ ಕಾಡಿನಲ್ಲಿ ಸ್ವಚ್ಚಂಧವಾಗಿ ತಿರುಗಾಡುತ್ತಿದ್ದ ಪ್ರಾಣಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುವ ಪಿಲಿಕುಳ ಎಂಬ ಪ್ರಾಣಿಗಳ ಜೈಲಿನಲ್ಲಿ ಪ್ರಾಣಿಗಳು ಯಾವ ದುಃಖದಲ್ಲಿದೆ ಎಂದು ತಮಗೆ ಗೊತ್ತಿದೆಯಾ?
ರೋಗಿಷ್ಠ ಪ್ರಾಣಿಗಳು ತಮ್ಮ ಕುಟುಕು ಜೀವವನ್ನು ಕೈ ಹಿಡಿದು ಪಡಬಾರದ ಪಡಿಪಾಟಿಲು ನಡೆಸುತ್ತಿದೆ. ಪ್ರಾಣಿಗಳು ಜೀವಕಳೆ ಇಲ್ಲದಂತೆ ಬದುಕುತ್ತಿರುವುದನ್ನು ನೋಡಲು ದುರ್ಬೀನು ಬೇಕಿಲ್ಲ ಸ್ವಾಮಿ. ಒಂದು ದಿನ ಪುರ್ಸೊತ್ತು ಮಾಡಿಕೊಂಡು ನೋಡಿದರೆ ತಮಗೇ ಗೊತ್ತಾದೀತು.
ಅಲ್ಲಿ ಪ್ರಾಣಿಗಳನ್ನು ಚೆನ್ನಾಗಿ ನೋಡುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಪ್ರಾಣಿಗಳು ಹಾಕಿದ ಮರಿಗಳು ಸತ್ತು ಹೋದರು ಅಲ್ಲಿ ನೋಡುವವರೇ ಇಲ್ಲ, ಕೇಳುವವರೇ ಇಲ್ಲ. ಎಷ್ಟು ಪ್ರಾಣಿಗಳು ನಾಪತ್ತೆಯಾಗಿದೆ ಎಂದು ಈವರೆಗೂ ತನಿಖೆ ಮಾಡಿದವರೇ ಎನ್ನುತ್ತಾರೆ ಅಲ್ಲಿನ ಕೆಲ ಸಿಬ್ಬಂದಿಗಳೇ. ಇನ್ನೂ ಪ್ರಾಣಿಗಳಿಗೆ ಕೇವಲ ಕಾಟಚಾರಕ್ಕಾಗಿ ಮಾತ್ರವೇ ಅಲ್ಲಿ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರವಾದ ಆರೋಪ ಇದೆ.
ಇಷ್ಟು ಮಾತ್ರವಲ್ಲದೇ ಈ ಪ್ರಾಣಿ ಸಂಗ್ರಹಾಲಯ ವಿಕ್ಷಣೇ ಮಾಡಿ ಹೊರ ಬರಬೇಕಾದರೆ ಯಾರು ಕೂಡ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವುದು ಬೀಡಿ, ಶಾಪವನ್ನೇ ಇಟ್ಟು ಕೊಂಡು ಬರುವವರೇ ಹೆಚ್ಚು. ಹಣ ಪಡೆಯುತ್ತಾರೆ ಆದರೆ ಇದರ ಒಳಗೆ ಏನಿದೆ? ಯಾವುದನ್ನು ನೋಡಲು ಹಣ… ಆದರೆ ಪ್ರಾಣಿಗಳನ್ನಾದರೂ ಚೆನ್ನಾಗಿ ಸಾಕಿದ್ದರಾ ಅದು ಇಲ್ಲ ಎನ್ನುತ್ತಾರೆ ಅನೇಕ ವೀಕ್ಷಕರು. ಇನ್ನೂ ಪರಿಸರ ಪ್ರೇಮಿಗಳು ಮತ್ತು ಪ್ರಾಣಿಪ್ರೀಯರು ನಿಮಗೆ ಮಂಗಳಾರತಿ ಮಾಡಲು ರೆಡಿ ಇದ್ದಾರೆ.
ಹೇಳಿಕೇಳಿ ನೀವು ಶಾಸಕರು!. ನಿಮಗೆ ಪವರ್ ಇದೆ. ಅಲ್ಲದೆ ನಿಮ್ಮದೇ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ನೀವು ಇಂತಹಾ ಕಾರ್ಯಕ್ರಮಗಳನ್ನು ನಡೆಸುವುದು ಬೇಡ ಎನ್ನುತ್ತಿಲ್ಲ. ಬದಲಿಗೆ ಅಲ್ಲಿ ಪ್ರಾಣಿಗಳನ್ನು ಯಾವ ರೀತಿ ನೋಡುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಗಮನವಹಿಸಿ. ಒಂದು ವೇಳೆ ತಪ್ಪಾಗಿದ್ದರೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಅಲ್ಲಿರುವ ಪ್ರಾಣಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅದೆಷ್ಟು ಸಮಯದಿಂದ ಅಲ್ಲೇ ಝಂಡಾ ಊರಿರುವ ನಿರ್ದೇಶಕರನ್ನು ಬದಲಾಯಿಸಿ, ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಿ ಆ ಮೂಲಕ ಆದರೂ ಪುಣ್ಯ ಕಟ್ಟಿಕೊಳ್ಳಿ!.
ಕ್ಷಮಿಸಿ ಮಿಸ್ಟರ್ ಮಂಜುನಾಥ ಭಂಡಾರಿ!