ಮಂಗಳೂರು: “ಪಿಲಿಕುಳದ ಪ್ರಾಣಿಗಳು ಅಳುತ್ತಿರುವಾಗ, ಪಿಲಿಕುಳೋತ್ಸವ ಆಯೋಜಿಸಿ ಏನು ಸಾಧಿಸಹೊರಟಿದ್ದೀರಿ ಮಿಸ್ಟರ್ ಮಂಜುನಾಥ ಭಂಡಾರಿ?” ಎಂದು ‘POLICEVARTHE.COM‘ ವರದಿ ತುಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಪಿಲಿಕುಳ ನಿಸರ್ಗಧಾಮದಲ್ಲಿ “ಪಿಲಿಕುಳೋತ್ಸವ” ಆಯೋಜನೆ ಮಾಡುವ ತರಾತುರಿಯಲ್ಲಿದ್ದ ಶಾಸಕ ಮಂಜುನಾಥ ಭಂಡಾರಿ ಇದೀಗ POLICEVARTHE.COM ವರದಿಯಿಂದ ಎಚ್ಚೆತ್ತು, ಪಿಲಿಕುಳದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂದಿನ ನವೆಂಬರ್ 14ರಿಂದ 18ರವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ “ಪಿಲಿಕುಳೋತ್ಸವ” ಅಥವಾ “ತುಳುನಾಡೋತ್ಸವ” ಹೆಸರಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಮಕ್ಕಳ ಹಬ್ಬ, ಕೃಷಿ ಮತ್ತು ಜಾನುವಾರು ಮೇಳ, ಕೆಸರುಗದ್ದೆಯಲ್ಲಿ ಜಿಲ್ಲಾಮಟ್ಟದ ಜಾನಪದ ಕ್ರೀಡೆ ಹಾಗೂ ಕಂಬಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸರಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Policevarthe.com ಪಿಲಿಕುಳದ ಅವ್ಯವಸ್ಥೆಯ ಬಗ್ಗೆ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಶಾಸಕರ ಗಮನಕ್ಕೆ ಬರುತ್ತಿದ್ದಂತೆ ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಎನ್.ಎಸ್. ಭೋಸರಾಜು ಅವರಿಗೆ ಪಿಲಿಕುಲ ನಿಸರ್ಗಧಾಮ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ.
ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನೂ ಸದಸ್ಯರನ್ನು ನೇಮಕ ಮಾಡದೇ ಇರುವುದರಿಂದ ಕೂಡಲೇ
ಸದಸ್ಯರನ್ನು ನೇಮಕ ಮಾಡಿ ಪ್ರಾಧಿಕಾರವನ್ನು ಸದೃಢಗೊಳಿಸಬೇಕು. ನಿಸರ್ಗಧಾಮದ ವ್ಯಾಪ್ತಿಯಲ್ಲಿ ಹಲವಾರು ಕಟ್ಟಡಗಳು ನಿರ್ಮಾಣವಾಗಿದ್ದು ಹಾಗೂ ಪೂರ್ಣಗೊಳ್ಳದೇ ಸಮರ್ಪಕವಾಗಿ ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದಿರುವುದನ್ನು ಕೂಲಕುಂಷವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲವೆಂದು Policevarthe.comನಲ್ಲಿ ವರದಿಯಾದಂತೆ, ಈ ಬಗ್ಗೆ ಪರಿಶೀಲಿಸಿ ಮೃಗಾಲಯ ಸುಧಾರಣೆಗೆಗೆ ಕ್ರಮ ವಹಿಸುವಂತೆ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಪಿಲಿಕುಳ ಉದ್ಯಾನವನ ಹಾಗೂ ಶೌಚಾಲಯಗಳ ನಿರ್ವಾಹಣೆ ಸರಿಯಾಗಿಲ್ಲವೆಂದು ಹಾಗೂ ನಿರ್ವಹಣೆ ಮಾಡಲು ಅಗತ್ಯದಷ್ಟು ಸಿಬ್ಬಂದಿ ಇಲ್ಲವೆಂದು ವರದಿಯಿಂದ ಗ್ರಹಿಸಿಕೊಂಡ ಶಾಸಕ ಪಿಲಿಕುಳದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕೂಡಲೇ ಸಂಬಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವಂತೆ ನಿರ್ದೇಶನವನ್ನು ನೀಡಬೇಕು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು “ಪಿಲಿಕುಳೋತ್ಸವ” ಅಥವಾ“ತುಳುನಾಡೋತ್ಸವ” ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
ಎಚ್. ಜಯಪ್ರಕಾಶ್ ಭಂಡಾರಿಯನ್ನು ಬದಲಾಯಿಸಲು ಒತ್ತಾಯ!
ಪಿಲಿಕುಳ ನಿಸರ್ಗಧಾಮದ ನಿರ್ದೇಶಕರಾಗಿ ಕಳೆದ ಹಲವಾರು ವರ್ಷಗಳಿಂದ ಜಂಡಾವೂರಿದ್ದು, ಅವರನ್ನು ಕೂಡಲೇ ಬದಲಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಪಿಲಿಕುಳದ ಅಪಸವ್ಯಗಳ ಬಗ್ಗೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿರುವ ಅವರು ಇಲ್ಲಿನ ಸಮಸ್ಯೆಗಳ ಬಗ್ಗೆ ಯಾವೊಂದು ಕ್ರಮಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಅವರ ಸ್ಥಾನಕ್ಕೆ ಪರಿಸರ ಪ್ರೇಮಿ, ವನ್ಯ ಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಒಬ್ಬ ಸೂಕ್ತ ವ್ಯಕ್ತಿಯನ್ನು ನೇಮಿಸುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.