ಬೆಂಗಳೂರು: ಎರಡೂವರೆ ವರ್ಷದ ಹಿಂದೆ ನಿವೃತ್ತ ಶಿಕ್ಷಕಿಯೋರ್ವರನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಇರ್ಫಾನ್ ಎಂಬಾತನೇ ಈ ಪ್ರಕರಣದಲ್ಲಿ ಸದ್ಯ ಪೊಲೀಸರು ಬಂಧಿಸಿರುವ ಆರೋಪಿ.
ನಿವೃತ್ತ ಶಿಕ್ಷಕಿ ಪ್ರಸನ್ನ ಕುಮಾರಿ(68) ಎಂಬ ಒಂಟಿ ಮಹಿಳೆಯನ್ನು ಆಕೆಯ ನೆರೆಯ ಮನೆಯವನಾದ ನಾಗೇಂದ್ರ ಮತ್ತು ಇಬ್ಬರು ಸಹಚರರ ಜೊತೆ ಸೇರಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ಇರ್ಫಾನ್, ಆ ಬಳಿಕ ತಲೆಮರೆಸಿಕೊಂಡಿದ್ದ.
ಮಹಿಳೆಯ ಮನೆಯಲ್ಲಿ ಚಿನ್ನಾಭರಣ, ನಗದು ದೋಚಲು ಸಂಚು ನಡೆಸಿದ್ದ ಈ ತಂಡ ದರೋಡೆ ಮಾಡಲು ಪ್ರಸನ್ನ ಕುಮಾರಿ ಅವರ ಮನೆಗೆ ಹೊಕ್ಕಿತ್ತು. ಈ ವೇಳೆ ಪ್ರಸನ್ನ ಕುಮಾರಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣದ ಆರೋಪಿಗಳಾದ ನಾಗೇಂದ್ರ ಮತ್ತು ಕೆ. ರಾಮರಾಜು ನ್ಯಾಯಾಂಗ ಬಂಧನದಲ್ಲಿದ್ದು, ಈಗ ಮತ್ತೋರ್ವ ಆರೋಪಿ ಸಹ ಪೊಲೀಸ್ ಬಲೆಗೆ ಬಿದ್ದಿದ್ದಾನೆ.