ಮಂಗಳೂರು: ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟೋರಿಯಸ್ ತಲ್ಲತ್ ಗ್ಯಾಂಗಿನ ಇಬ್ಬರನ್ನು ಬಂಧಿಸಲಾಗಿದೆ.
ಮಂಗಳೂರಿನ ಕಡೆ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ 1 ಕೋಟಿ ರೂ. ಹಣವನ್ನು ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ.
ಅಂಕೋಲಾ ಬಳಿಯ ರಾಮನಗುಳಿಯಲ್ಲಿ ಕಳೆದ ಜ. 28 ರಂದು ಕಾರ್ ಒಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಹಿಂಬದಿ ಜಖಂ ಆಗಿದ್ದು ಇದರಲ್ಲಿ 1 ಕೋಟಿ 14 ಲಕ್ಷ ರೂ. ಗಳು ಪತ್ತೆಯಾಗಿತ್ತು. ಘಟನೆಯ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕಾರು ಮಂಗಳೂರಿನ ಜ್ಯುವೆಲ್ಲರಿ ಒಂದರ ಮಾಲ್ಹಕ ರಾಜೇಶ್ ಪವಾರ್ ಎಂಬವರಿಗೆ ಸೇರಿದ್ದಾಗಿ ಮತ್ತು ಈ ಕಾರು ಕಳವಾಗಿರುವ ಬಗ್ಗೆ ಕೆಲ ಸಮಯದ ಹಿಂದೆ ರಾಜೇಶ್ ಮತ್ತು ಕಾರಿನ ಚಾಲಕ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿದು ಬಂದಿತ್ತು.
ಈ ಪ್ರಕರಣದಲ್ಲಿ ಇಬ್ಬರು ಚಾಲಕರನ್ನು ತನಿಖೆಗೆ ಒಳಪಡಿಸಿದ್ದ ಪೊಲೀಸರು ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಸದ್ಯ ಮಂಗಳೂರಿನ ಬಜಾಲ್ ಮತ್ತು ಅಡ್ಯಾರ್ ಪ್ರದೇಶದಲ್ಲಿ ತಲ್ಲತ್ ಗ್ಯಾಂಗಿನ ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.