ಮೊಬೈಲ್ ಸಿಡಿಆರ್ ಆಧರಿಸಿ ವಿಚಾರಣೆ ನಡೆಸಿದ ಪೊಲೀಸರು!
ಗಾಂಜಾ, ಮೊಬೈಲ್ ಗೇಮಿಂಗ್ ಕುರಿತು ಮುಂದುವರಿದ ತನಿಖೆ!
ತನಿಖೆ ಮತ್ತಷ್ಟು ತೀವ್ರಗೊಳಿಸಿ, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರುವ ಐ.ಜಿ ಅಮೀತ್ ಸಿಂಗ್
ಮಂಗಳೂರು: ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ನಾಪತ್ತೆಯಾಗಿ ಅನೇಕ ದಿನಗಳಾಗಿವೆ. ಇದೀಗ ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಯತೀಶ್ ನೇತೃತ್ವದಲ್ಲಿ ಮತ್ತಷ್ಟು ತನಿಖೆ ತೀವ್ರಗೊಳಿಸಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳನ್ನು ಮತ್ತು ಜಿಲ್ಲೆಯ ವಿವಿಧ ಠಾಣೆಗಳ ಕ್ರೈಮ್ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳನ್ನು ತನಿಖೆಯಲ್ಲಿ ಜೋಡಿಸಿಕೊಂಡಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಬಾಲಕ ದಿಗಂತ್ ಬಳಸುತ್ತಿದ್ದ ಮೊಬೈಲ್ ನ ಸಿಡಿಆರ್ ಆಧರಿಸಿ ಕೆಲವರ ವಿಚಾರಣೆ ಕೂಡ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಚಾರಣೆಯಲ್ಲಿ ದಿಗಂತ್ ಸ್ನೇಹಿತರು, ಸಹಪಾಠಿಗಳ ಜೊತೆಗೆ ನಾಪತ್ತೆಯ ಮೊದಲು ನಡೆಸಿದ ಎಲ್ಲಾ ರೀತಿಯ ಸಂಭಾಷಣೆಗಳ ಕುರಿತು ಕೂಡ ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ಮೊಬೈಲ್ ಗೇಮಿಂಗ್ ಮತ್ತು ಗಾಂಜಾ ಕುರಿತು ಕೂಡ ಹಲವು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ಕೂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪಶ್ಚಿಮ ವಲಯ ಐ.ಜಿ ಅಮೀತ್ ಸಿಂಗ್ ಮತ್ತು ಎಸ್ಪಿ ಅವರು ವಿಶೇಷ ಮುತುವರ್ಜಿವಹಿಸಿ ತನಿಖೆಯ ಕ್ಷಣ ಕ್ಷಣದ ಮಾಹಿತಿಯನ್ನು ಕೂಡ ಅಧಿಕಾರಿಗಳಿಂದ ಪಡೆಯುತ್ತಿದ್ದು ಮೊಬೈಲ್ ಅನ್ನು ಕೂಡ ವಿಧಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಕಳುಹಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ.

ಬಾಲಕನ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಫರಂಗಿಪೇಟೆಯನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿದವು. ಹಿಂದೂ ಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಫರಂಗಿಪೇಟೆ ಪರಿಸರದಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು, ಬಿಜೆಪಿಗರಿಗೆ ಭದ್ರತೆಯೇ ಇಲ್ಲವಾಗಿದೆ. ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು ಎಂದು ಹೇಳಿದೆ.

ಈಗ ಬಾಲಕ ನಾಪತ್ತೆಯಾಗಿ ಆರು ದಿನಗಳೇ ಕಳೆದಿದ್ದು, ಈವರೆಗೂ ಆತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನೆರಡು ದಿನಗಳಲ್ಲಿ ದಿಗಂತ್ ಕುರಿತ ಮಾಹಿತಿ ದೊರೆಯದೇ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯ ಕಾವು ಜಿಲ್ಲೆಯಾದ್ಯಂತ ಹಬ್ಬಲಿರುವ ಎಚ್ಚರಿಕೆಯನ್ನು ಸಹ ಹಿಂದೂ ಸಂಘಟನೆಗಳು ನೀಡಿವೆ.

