ಕಲ್ಬುರ್ಗಿ: ಮದುವೆಯಾದ ಆರೇ ತಿಂಗಳಿಗೆ ಪತ್ನಿಯ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾದೇವ ನಗರದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಆಳಂದ ತಾಲೂಕಿನ ನವಜಾಪುರದ ರಾಕೇಶ್ ಬಿರಾದಾರ(30) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಕೆಲಸ ಮಾಡುವ ವಿಚಾರವಾಗಿ ರಾಕೇಶ್ ಹಾಗೂ ಆತನ ಪತ್ನಿ ಮೇಘಾ ನಡುವೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಮೇಘಾ ಸಹೋದರಿ ಪ್ರಿಯಾಂಕ ಮತ್ತು ತಾಯಿ ರೇಣುಕಾ ಅವರು ರಾಕೇಶ್‌ಗೆ ಜೀವ ಬೆದರಿಕೆ ಹಾಕಿದ್ದರು. ಜೊತೆಗೆ ತಮ್ಮ ಮಗಳಿಗೆ ತೊಂದರೆಯಾದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ನಿನ್ನೆಯೂ ದಂಪತಿ ಮಧ್ಯೆ ಜಗಳ ನಡೆದಿದ್ದು, ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ, ರಾಜಿ ಮಾಡಿಸಿದ್ದರೂ. ಹೀಗಿದ್ದರೂ ಅವರಿಬ್ಬರ ನಡುವಿನ ಸಮಸ್ಯೆ ಹಾಗೆಯೇ ಮುಂದುವರಿದಿತ್ತು ಎನ್ನಲಾಗುತ್ತಿದೆ. ಇಂದು ಮೇಘಾ ರಾಕೇಶ್ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ್ದಳು. ಇದರಿಂದ ಬೇಸತ್ತ ರಾಕೇಶ್ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಗಿ ಹೇಳಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪತ್ನಿ ಮೇಘಾ ಸೇರಿ ಮೂವರ ಮೇಲೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಪತ್ನಿ ಮೇಘಾ, ಸಣ್ಣ ಪುಟ್ಟ ವಿಚಾರಕ್ಕೂ ರಾಕೇಶ್ ನನ್ನೊಂದಿಗೆ ಗಲಾಟೆ ಮಾಡುತ್ತಿದ್ದ. ಅವರ ಮನೆಯವರೂ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿಲ್ಲ. ನಿನ್ನೆ ಸಂಜೆ ನಡೆದ ಗಲಾಟೆ ವೇಳೆ ರಾಕೇಶ್ ನನಗೆ ಹಲ್ಲೆ ಮಾಡಿದ್ದಾಗಿಯೂ ಆರೋಪಿಸಿದ್ದಾಳೆ.