ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಅವರಿಗೆ ಇಲಾಖೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ಫೆ. 5 ರಂದು ಬಂಟ್ವಾಳದಲ್ಲಿ ಸಾರ್ವಜನಿಕ ಕಾರ್ಯಕ್ರಮ ಜನತಾ ದರ್ಶನ ನಡೆಸಿದ್ದು, ಸಾರ್ವಜನಿಕರ ದೂರಿಗೆ ಸ್ಪಂದಿಸುವ ಈ ಕಾರ್ಯಕ್ರಮಕ್ಕೆ ಕೃಷ್ಣವೇಣಿ ಅವರು ಯಾವುದೇ ಪೂರ್ವಾನುಮತಿ ಇಲ್ಲದೆ ಗೈರುಹಾಜರಾಗಿದ್ದರು. ಈ ಕಾರಣಕ್ಕೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಚಿವರ ಸೂಚನೆಯ ಮೇರೆಗೆ ಕೃಷ್ಣವೇಣಿ ಅವರಿಗೆ ನೊಟೀಸು ಜಾರಿ ಮಾಡಿದ್ದು, ಇವರ ವಿರುದ್ಧ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಶಿಸ್ತುಕ್ರಮವನ್ನು ಏಕೆ ಕೈಗೊಳ್ಳಬಾರದು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸೂಕ್ತ ಉತ್ತರವನ್ನು ಮೂರು ದಿನಗಳಲ್ಲಿ ನೀಡದೇ ಹೋದಲ್ಲಿ ನಿಯಮಗಳಿಗೆ ಅನುಗುಣವಾಗಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.