ಪುತ್ತೂರು: ಅತ್ತೆ ಮತ್ತು ನಾದಿನಿಯ ಕತ್ತಿಗೆ ಹಗ್ಗ ಬಿಗಿದು ಹತ್ಯೆ ಮಾಡಿ, ಎರಡು ದಿನಗಳ ಬಳಿಕ ತನ್ನದೇ ಮಕ್ಕಳನ್ನು ಕೆರೆಗೆ ನೂಕಿ ಕೊಂದ ಪಾಪಿಗೆ ಜೀವವಿರುವ ವರೆಗೆ ಜೈಲಿನಲ್ಲೇ ಕೊಳೆಯುವ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ವಿಧಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಮ್ಯಾನೇಜರ್ ಆಗಿದ್ದ ಪಾಣಾಜೆಯ ರಮೇಶ್ ನಾಯ್ಕ ಎಂಬಾತ ತನ್ನ ಅತ್ತೆ ಮತ್ತು ನಾದಿನಿಯನ್ನು ತುಮಕೂರಿನಲ್ಲಿ ಕೊಲೆ ಮಾಡಿದ್ದ. ಅದಾಗಿ ಎರಡು ದಿನಗಳ ಬಳಿಕ ತನ್ನ ಇಬ್ಬರು ಪುಟಾಣಿ ಮಕ್ಕಳನ್ನು ಪಾಣಾಜೆಯಲ್ಲಿ ಕೆರೆಗೆ ದೂಡಿ ಹತ್ಯೆ ಮಾಡಿದ್ದ. ಈ ಸಂಬಂಧ ತುಮಕೂರು ಮತ್ತು ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು.
ಅಪರಾಧಿಗೆ ತುಮಕೂರು ಜಿಲ್ಲಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರೆ, ಪುತ್ತೂರು ಕೋರ್ಟ್ ಆತನಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ಶಿಕ್ಷೆಯನ್ನು ಕರ್ನಾಟಕದ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಆದರೆ ಆ ಬಳಿಕ ಅಪರಾಧಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ನೇಣಿನ ಕುಣಿಕೆಯಿಂದ ತನ್ನನ್ನು ಪಾರು ಮಾಡುವಂತೆ ಮನವಿ ಮಾಡಿದ್ದ.
ಈ ಸಂಬಂಧ ವಿಚಾರಣೆ, ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್ ಈ ಹತ್ಯೆ ಅಮಾನವೀಯವಾಗಿದೆ. ಅಪರಾಧ ವು ಅನಾಗರೀಕತೆಯಿಂದ ಕೂಡಿದ್ದು, ತಂದೆಯಿಂದಲೇ ಹತ್ಯೆಗೀಡಾದ ಮಕ್ಕಳ ಅಸಾಹಾಯಕತೆಯನ್ನು ಸಹ ನ್ಯಾಯಾಲಯ ಒಪ್ಪಿಕೊಂಡಿತು. ಆದರೆ ಅಪರಾಧಿಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲವಾಗಿದ್ದು ಮತ್ತು ಕೊಲೆಯಾದ ವ್ಯಕ್ತಿಗಳ ಜೊತೆಗೂ ಈ ಹಿಂದೆ ಉತ್ತಮ ಸಂಬಂಧ ಹೊಂದಿದ್ದು ನ್ಯಾಯಾಲಯಗಳು ಈ ಅಂಶವನ್ನು ಪರಿಗಣಿಸಿದಂತಿಲ್ಲ. ಆದ್ದರಿಂದ ಅಪರಾಧಿಗೆ ಗಲ್ಲು ಶಿಕ್ಷೆಯ ಬದಲು ಸಾಯುವ ವರೆಗೆ ಜೈಲುವಾಸ ಶಿಕ್ಷೆ ನೀಡುವಂತೆ ಆದೇಶ ನೀಡಿದೆ.