ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ದೋಣಿ ನಡೆಸುತ್ತಿದ್ದ ಕುಟುಂಬವೊಂದು 30 ಕೋಟಿ ರೂ. ಗಳನ್ನು ಸಂಪಾದನೆ ಮಾಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ದೋಣಿ ನಡೆಸುವವರನ್ನು ಶೋಷಣೆ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದ ಬೆನ್ನಲ್ಲೇ ಅದಕ್ಕೆ ಉತ್ತರ ನೀಡಿರುವ ಯೋಗೀಜಿ ದೋಣಿ ನಡೆಸುವ ಕುಟುಂಬ ಕೋಟ್ಯಾಧೀಶರಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುಟುಂಬ 130 ದೋಣಿಗಳನ್ನು ಹೊಂದಿದ್ದು, ಅವರು 30 ಕೋಟಿ ರೂ. ಸಂಪಾದನೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಹಾಗೆಯೇ ಕುಂಭಮೇಳದಲ್ಲಿ ದರೋಡೆ, ಕೊಲೆ, ಕಿರುಕುಳ, ಅಪಹರಣದಂತಹ ಯಾವೊಂದು ಘಟನೆಯೂ ನಡೆದಿಲ್ಲ. ಕೋಟಿ ಕೋಟಿ ಜನರು ಈ ಪುಣ್ಯಕಾರ್ಯಕ್ಕೆ ಬಂದು ಸಂತೋಷದಿಂದ ಮರಳಿದ್ದಾರೆ ಎಂದು ಯೋಗಿ ತಿಳಿಸಿದ್ದಾರೆ.
ಜೊತೆಗೆ 7,500 ಕೋಟಿ ರೂ. ಹೂಡಿಕೆ ಮಾಡಿ 3 ಲಕ್ಷ ಕೋಟಿ ರೂ. ವ್ಯವಹಾರ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ.