ಬೆಂಗಳೂರು: ಹೈಕೋರ್ಟಿನ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿ ಮಾಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈರ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಅರ್‌ಎಸ್ ಅಗ್ರಹಾರ ನಿವಾಸಿ ವಿಜೇತ್ ರಾಜೇಗೌಡ, ನೆಲಮಂಗಲದ ಚಿನ್ನಮಂಗಲ ನಿವಾಸಿ ಲೋಹಿತ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ನಾಲ್ವರಿಗೆ ನ್ಯಾಯಾಧೀಶರ ಹೆಸರಲ್ಲಿ ನಕಲಿ ಆದೇಶ ಪ್ರತಿ ಕಳುಹಿಸಿ 1.53 ಕೋಟಿ ರೂ. ವಂಚಿಸಿದ್ದಾರೆ.
ಆರೋಪಿ ವಿಜೇತ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಯುವತಿಯೋರ್ವಳ ಸಂಪರ್ಕ ಸಾಧಿಸಿ, ಆ ಯುವತಿ ಆತನನ್ನು ಮದುವೆಯಾಗಲು ಆಸಕ್ತಿ ತೋರಿದಾಗ ಈ ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತುಕತೆ ಆರಂಭಿಸಿದ್ದರು.
ಈ ಮಧ್ಯೆ ಆರೋಪಿ ವಿಜೇತ್ ‘ತನ್ನ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ 1.50 ಕೋಟಿ ರೂ. ಜಪ್ತಿ ಮಾಡಿದ್ದು, ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಇದೀಗ ನ್ಯಾಯಾಲಯ ಇಡಿ ಅಧಿಕಾರಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ವಶಪಡಿಸಿದ ಹಣವನ್ನು ವಾಪಾಸ್ಸು ಮಾಡುವಂತೆ ಆದೇಶಿಸಿದೆ. ಅನಗತ್ಯ ದಾಳಿ ನಡೆಸಿದ ಅಧಿಕಾರಿಗಳಿಗೂ ನ್ಯಾಯಾಲಯ ದಂಡ ವಿಧಿಸಿದೆ ಎಂದು ನ್ಯಾಯಾಧೀಶರ ಹೆಸರಲ್ಲಿ ನಕಲಿ ಪತ್ರ ಸೃಷ್ಟಿ ಮಾಡಿದ್ದಾನೆ.ಆ ಆದೇಶ ಪತ್ರವನ್ನು ಯುವತಿಗೂ ಕಳಿಸಿ, ಆಕೆಯನ್ನು ನಂಬಿಸಿದ್ದಾನೆ.
ಜಪ್ತಿಯಾದ ಹಣ ಇನ್ನೇನು ಕೆಲವೇ ಸಮಯದಲ್ಲಿ ನನ್ನ ಖಾತೆಗೆ ಬರಲಿದ್ದು, ಕೆಲ ತಿಂಗಳ ಮಟ್ಟಿಗೆ ಆಕೆಯಿಂದ ಹಣ ಕೇಳಿ ಸುಮಾರು 50 ಲಕ್ಷ ನೀಡಿದ್ದಾಳೆ. ಇನ್ನೂ ಹಣ ಬೇಕು ಎಂದ ವಿಜೇತ್‌ಗೆ ಆಕೆಯ ಪರಿಚಿತರಿಂದಲೂ ಹಣ ಹಾಕಿಸಿ 1.53 ಕೋಟಿ ರೂ. ಪಂಗನಾಮ ಹಾಕಿದ್ದಾನೆ. ಆ ಬಳಿಕ ಮ್ಯಾಟ್ರಿಮೋನಿಯಿಂದ ತನ್ನ ಪ್ರೊಫೈಲ್ ಅಳಿಸಿ, ಯುವತಿಯ ಸಂಪರ್ಕ ಕಡಿತಗೊಳಿಸಿದ್ದಾನೆ. ಈತನ ಈ ಕುಕೃತ್ಯಗಳಿಗೆ ಲೋಹಿತ್ ಸಹಾಯ ಮಾಡಿದ್ದಾನೆ.
ಈ ಘಟನೆಯ ಬಳಿಕ ಯುವತಿ ಮತ್ತು ಹಣ ನೀಡಿದ ಇತರರಿಗೂ ಈ ವಂಚನೆಯ ಸಂದೇಹ ಬಂದಿದೆ. ಈಗ ಹೈ ಕೋರ್ಟ್ ನ ಲೀಗಲ್ ಸೆಲ್‌ಗೆ ದೂರು ನೀಡಿದ್ದರು. ಲೀಗಲ್ ಸೆಲ್ ರಿಜಿಸ್ಟ್ರಾರ್ ಈ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.