ಪುತ್ತೂರು: ತಾಲೂಕಿನ ಜನರ ಬಹುಕಾಲದ ಆಸೆ ‘ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು’ ಆರಂಭವಾಗುವ ಕಾಲ ಸನ್ನಿಹಿತವಾಗಿದೆ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈ ಕೊನೆಗೂ ಪುತ್ತೂರಿಗೆ ಈ ಬಾರಿಯ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ತರುವ ಪ್ರಯತ್ನದಲ್ಲಿ ಗೆಲುವು ಸಾಧಿಸಿದ್ದು, ಇದು ಪುತ್ತೂರಿಗರ ಮುಖದಲ್ಲಿ ನಗು ಮೂಡಿಸಿರುವುದು ಸುಳ್ಳಲ್ಲ.
ಸಿ ಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಎಂದು ಘೋಷಣೆ ಮಾಡುತ್ತಲೇ, ಇತ್ತ ಪುತ್ತೂರಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಇದೇ ನಿರೀಕ್ಷೆಯಲ್ಲಿ ಬ್ಯಾಂಡ್ ವಾದ್ಯಗಳ ಮೂಲಕ ಬೆಂಗಳೂರಿಗೆ ತೆರಳಿದ್ದ ಅಶೋಕ್ ರೈ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಮುಂದೆ ಸಂಭ್ರಮ ಪಟ್ಟಿದ್ದಾರೆ. ಶಾಸಕ ಅಶೋಕ್ ರೈ ಅವರು ಸಹ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ಶಾಸಕ ಅಶೋಕ್ ರೈ ಅವರನ್ನು ಹೆಗಲ ಮೇಲೆ ಗೊತ್ತು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ದಿನ ಪುತ್ತೂರಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದು ಅಶೋಕ್ ರೈ ಅವರು ತಮ್ಮ ಪ್ರಯತ್ನ ಸಫಲವಾದ ಬಗ್ಗೆ ಮೊದಲ ರಿಯಾಕ್ಷನ್ ನೀಡಿದ್ದಾರೆ.
ಈ ಹಿಂದೆ ಕರುನಾಡಿನ ಕಂಬಳವನ್ನು ಬೆಂಗಳೂರಿಗೆ ಕೊಂಡೊಯ್ಯು ಜನರ ಅಭಿಮಾನಕ್ಕೆ ಪಾತ್ರರಾಗಿದ್ದ ಅಶೋಕ್ ರೈ, ಈಗ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗುವಂತೆ ಮಾಡಿ ಪುತ್ತೂರಿಗರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದಾರೆ ಎನ್ನುವುದು ನಿರ್ವಿವಾದ.