ರಾಮನಗರ: ಅಧಿಕಾರಿಗಳ ಗ್ರೂಪ್ ಫೋಟೋವನ್ನು ಕಚೇರಿಯಲ್ಲಿ ಹಾಕಿದ್ದಕ್ಕೆ ಸಂಬಂಧಿಸಿ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಅಧಿಕಾರಿಗಳೇನು ರಾಷ್ಟ್ರದ ನಾಯಕರೇ? ಅಧಿಕಾರಿಗಳ ವೈಯಕ್ತಿಕ ಗುಂಪು ಫೋಟೋಗಳನ್ನು ಯಾತಕ್ಕಾಗಿ ಹಾಕಿದ್ದೀರಿ? ಗೋಡೆಗೆ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ಹಾಕಿ. ಈ ಫೋಟೋಗಳನ್ನು ತೆಗೆಯಿರಿ ಎಂದು ಗದರಿದ್ದಾರೆ.
ತಕ್ಷಣವೇ ಉಪ ನೋಂದಣಾಧಿಕಾರಿಗಳು ಆ ಫೋಟೋವನ್ನು ತೆರವು ಮಾಡಿದ್ದಾರೆ.
ಹಾಗೆಯೇ ಗುರುತಿನ ಚೀಟಿ ಧರಿಸದ ಕಚೇರಿಯ ಸಿಬ್ಬಂದಿ, ಸಾರ್ವಜನಿಕರಿಗೆ ಲೋಕಾಯುಕ್ತ ಪೊಲೀಸರ ಮಾಹಿತಿ ತಿಳಿಯಲು ಯಾವುದೇ ಬೋರ್ಡ್ ಇಲ್ಲದಿರುವುದು, ಕಚೇರಿಯಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವುದನ್ನೂ ಅವರು ಗಮನಿಸಿದ್ದು, ಇದು ಸರ್ಕಾರಿ ಕಚೇರಿ ಅಥವಾ ಬೇರೇನಾದರೂ ಎಂದುಕೊಂಡಿದ್ದೀರೋ? ಎಂದು ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.