ಬೆಂಗಳೂರು: ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಶವಾದ ನಟಿ ರನ್ಯಾಗೆ ಪ್ರಭಾವಿ ರಾಜಕೀಯ ನಾಯಕರ ನಂಟಿದೆ ಎಂದು ಹೇಳಲಾಗುತ್ತಿದೆ.
DRI ಅಧಿಕಾರಿಗಳು ರನ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಸಂದರ್ಭದಲ್ಲಿ ಈ ಕೃತ್ಯದಲ್ಲಿ ಪ್ರಭಾವಿ ರಾಜಕೀಯ ನಾಯಕರುಗಳ ನಂಟಿನ ನೆರಳು ಕಂಡುಬಂದಿದೆ ಎನ್ನಲಾಗುತ್ತಿದೆ. ಹಲವು ರಾಜಕೀಯ ನಾಯಕರ ಜೊತೆಗೆ ರನ್ಯಾ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿಯನ್ನೂ ಅಧಿಕಾರಿಗಳು ವಿಚಾರಣೆಯ ವೇಳೆಯಲ್ಲಿ ಕಂಡುಕೊಂಡಿದ್ದಾರೆ.
ಇದಕ್ಕೆ ಪುರಾವೆ ಎನ್ನುವ ಹಾಗೆ ಕರ್ನಾಟಕ ಸರ್ಕಾರದಿಂದ ರನ್ಯಾ ನಿರ್ದೇಶನದಲ್ಲಿ ನಡೆಯುತ್ತಿರುವ ಸಂಸ್ಥೆಗೆ 12 ಎಕರೆ ಜಮೀನು ಮಂಜೂರಾಗಿದೆ. ಈ ಕಂಪೆನಿಗೆ ರನ್ಯಾ ಮತ್ತು ರಷಬ್ ಇಬ್ಬರೂ ನಿರ್ದೇಶಕರಾಗಿದ್ದಾರೆ. 2023 ರಲ್ಲಿ ಈ ಸಂಸ್ಥೆಗೆ ಭೂಮಿ ಮಂಜೂರಾಗಿರುವುದಾಗಿದೆ. ಈ ಸಂಸ್ಥೆಗೆ ಸರ್ಕಾರ ಯಾವ ಕಾರಣಕ್ಕಾಗಿ ಜಮೀನು ಮಂಜೂರು ಮಾಡಿದೆ ಎನ್ನುವ ಪ್ರಶ್ನೆ ಸಹ ಈಗ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೇಳಿ ಬಂದಿರುವ ಪ್ರಭಾವಿ ಸಚಿವರು ರನ್ಯಾ ಮದುವೆಯಲ್ಲೂ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ಆ ಸಚಿವರು ಯಾರು?, ಈ ಪ್ರಕರಣದಲ್ಲಿ ಅವರ ಪಾತ್ರ ಇದೆಯೇ?, ಇದ್ದರೆ ಅವರು ಯಾವ ರೀತಿಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ? ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.