ಕಲ್ಬುರ್ಗಿ: ಕಳ್ಳತನ ಮಾಡುವ ತಂಡದಿಂದ ತನ್ನನ್ನು ದೂರವಿರಿಸಿದ್ದಕ್ಕೆ ಪ್ರಶ್ನೆ ಮಾಡಿದ ಗೆಳೆಯನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಚೌಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಖಾದ್ರಿ ಚೌಕ್ ಹತ್ತಿರ ಇಮ್ರಾನ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಒಬ್ಬ ಬಾಲಾಪರಾಧಿ ಎಂದು ತಿಳಿದು ಬಂದಿದೆ.
ಬಂಧಿತರನ್ನು ಮಹಮ್ಮದ್ ಅಮ್ಜಾದ್, ಅಯಾನ್ ಖಾದ್ರಿ, ಜುಬೇರ್ ಖಾದ್ರಿ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಮೃತ ಇಮ್ರಾನ್ ವಿರುದ್ಧ ಪೊಲೀಸ್ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದಾಗಿ ಈ ನಾಲ್ವರು ಆತನಿಂದ ಅಂತರ ಕಾಪಾಡಿಕೊಂಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ನನ್ನನ್ನು ಯಾಕೆ ದೂರ ಇರಿಸಿದ್ದೀರಿ ಎಂದು ಇಮ್ರಾನ್ ಇವರೆಲ್ಲರ ಜೊತೆಗೆ ಜಗಳವಾಡಿದ್ದ. ಜಗಳ ವಿಕೋಪಕ್ಕೆ ಹೋಗಿ ಇಮ್ರಾನ್ ಕೊಲೆಯಲ್ಲಿ ಅಂತ್ಯವಾಗಿತ್ತು.